ಸಿಎಂ ಯೋಗಿ ಆದಿತ್ಯಾನಾಥ್ ರಾಜ್ಯದಲ್ಲಿ ಮಕ್ಕಳ ಮರಣ ಮೃದಂಗ ಮುಂದುವರೆದಿದೆ. ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್`ಡಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ 42 ನವಜಾತ ಶಿಶುಗಳು ಅಸುನೀಗಿವೆ.
ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ಘಟಕಗಳಾದ ಎನ್`ಐಸಿಯು ಮತ್ತು ಪಿಐಸಿಯುನಲ್ಲಿ ಮಕ್ಕಳ ಸಾವು ಸಂಭವಿಸಿದ್ದು, 7 ಮಕ್ಕಳು ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್`ನಿಂದ ಸಾವನ್ನಪ್ಪಿದ್ದು, ಉಳಿದ ಮಕ್ಕಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕಳೆದ ತಿಂಗಳಿಂದೀಚೆಗೆ ಬಿಆರ್`ಡಿ ಆಸ್ಪತ್ರೆಯಲ್ಲಿ ಹತ್ತಿರತ್ತಿರ 200 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಆಗಸ್ಟ್ 11ರ ಹೊತ್ತಿಗೆ 5 ದಿನಗಳ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ 60 ಮಕ್ಕಳು ಸಾವನ್ನಪ್ಪಿದ್ದವು. ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಮಂದಿಯ ವಿರುದ್ಧ ತನಿಖೆ ನಡೆಯುತ್ತಿದ್ದು, ಈ ಮಧ್ಯೆಯೇ ಮಕ್ಕಳ ಮರಣ ಮೃದಂಗ ಮುಂದುವರೆದಿದೆ. ಆಗಸ್ಟ್ 27ರಂದು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದ 342 ಮಕ್ಕಳ ಪೈಕಿ 17 ಮಕ್ಕಳು ಸಾವನ್ನಪ್ಪಿವೆ. ಆಗಸ್ಟ್ 28ರಂದು 344 ರೋಗಿಗಳ ಪೈಕಿ 25 ಮಕ್ಕಳು ಸಾವನ್ನಪ್ಪಿವೆ.
ಉತ್ತರ ಪ್ರದೇಶವಲ್ಲದೇ ಬಿಹಾರ, ನೇಪಾಳದಿಂದಲೂ ಬಿಆರ್`ಡಿ ಆಸ್ಪತ್ರೆಗೆ ಬಹಳಷ್ಟು ಜನ ಬರುತ್ತಾರೆ. ಇಲ್ಲಿಗೆ ದೂರದ ಊರುಗಳಿಂದ ಬರಲು ಕನಿಷ್ಠ 2 ಗಂಟೆ ಸಮಯ ಹಿಡಿಯುವುದರಿಂದ ಮಕ್ಕಳು ಆಸ್ಪತ್ರೆಗೆ ಬರುವ ಹೊತ್ತಿಗೆ ಗಂಭೀರ ಸ್ಥಿತಿ ತಲುಪಿರುತ್ತಾರೆ ಎನ್ನಲಾಗಿದೆ. ನವಜಾತ ಶಿಶುಗಳನ್ನ ಕಾಡುತ್ತಿರುವ ಎನ್ಸೆಫಾಲಿಟಿಸ್ ಚಿಕಿತ್ಸೆಗೆ ಹಲವೆಡೆ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ತೆರೆದಿದೆಯಾದರೂ ಮಕ್ಕಳ ವೈದ್ಯರ ಕೊರತೆಯಿಂದ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ