ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್`ಡಿ ಮೆಡಿಕಲ್ ಕಾಲೇಜಿನಲ್ಲಿ 60 ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ಸ್ಫೋಟಕ ಮಾಹಿತಿಯನ್ನ ಪತ್ತೆ ಹಚ್ಚಿದ್ದಾರೆ.
ಮಕ್ಕಳ ಸಾವಿನ ಹಿಂದೆ ಆಸ್ಪತ್ರೆಯ ಹಣಕಾಸು ಅವ್ಯವಹಾರದ ಕರ್ಮಕಾಂಡ ಇರುವುದು ಬೆಳಕಿಗೆ ಬಂದಿದೆ. ಆಕ್ಸಿಜನ್ ಕೊರತೆಯಿಂದಲೇ ಮಕ್ಕಳು ಮೃತಪಟ್ಟಿದ್ದು, ಆಕ್ಸಿಜನ್ ಸರಬರಾಜುದಾರರಿಗೆ ಪೇಮೆಂಟ್ ತಡವಾಗಿರುವುದು ಆಕ್ಸಿಜನ್ ಕೊರತೆಗೆ ಕಾರಣ ಎಂದು ತಿಳಿದು ಬಂದಿದೆ.
ನ್ಯೂಸ್-18 ವರದಿ ಮಾಡಿರುವ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ತನಿಖಾ ತಂಡ 8 ವೈಫಲ್ಯಗಳನ್ನ ಎತ್ತಿ ತೋರಿಸಿದೆ. ಆಕ್ಸಿಜನ್ ಸರಬರಾಜುದಾರರಿಗೆ ನೀಡಬೇಕಾದ ಪೇಮೆಂಟ್ ಆಗಸ್ಟ್ 5ರಂದೆ ಆಸ್ಪತ್ರೆ ಖಾತೆಗೆ ಕ್ರೆಡಿಟ್ ಆಗಿದೆ. ಆಸ್ಪತ್ರೆಯ ಸಿಬ್ಬಂದಿ ಹಣದ ವರ್ಗಾವಣೆಯನ್ನ ತಡೆದಿದ್ದಾರೆ. ಇದರಲ್ಲಿ 6 ಉದ್ಯೋಗಿಗಳ ಕೈವಾಡವಿದ್ದು, ಭ್ರಷ್ಟಾಚಾರದ ಸುಳಿವು ಸಿಕ್ಕಿದೆ. ಪದೇ ಪದೇ ಕೇಳಿದಾಗಲೂ ಹಣ ಬಿಡುಗಡೆ ಆಗಿಲ್ಲ.
ತನಿಖಾ ತಂಡ ನೀಡಿದ ವರದಿಯನ್ನ ಮುಖ್ಯ ವೈದ್ಯಾಧಿಕಾರಿಗಳು ಅಂಗಿಕರಿಸಿದ್ದು, ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 7ರಂದು ಸರ್ಕಾರಿ ಸ್ವಾಮ್ಯದ ಬಿಆರ್`ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಎನ್ಐಸಿಯುನಲ್ಲಿ 60 ಮಕ್ಕಳು ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದರು. ಬಳಿಕ ಸಿಎಂ ಯೋಗಿ ಆದಿತ್ಯಾನಾಥ್ ತನಿಖೆಗೆ ಆದೇಶಿಸಿದ್ದರು.