Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಂಗಾರು ಮಳೆಗೆ ಮಲೆನಾಡಿನ ಕಂಪು

ಮುಂಗಾರು ಮಳೆಗೆ ಮಲೆನಾಡಿನ ಕಂಪು
ಬೆಂಗಳೂರು , ಬುಧವಾರ, 6 ಜೂನ್ 2018 (18:11 IST)
ಮಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ... ಮಳೆಯಲ್ಲಿ ನೆನೆಯುತ್ತ ಆ ಚುಮ ಚುಮ ಚಳಿಗೆ ಸಣ್ಣದಾಗಿ ನಡುಗಿ ಮನೆಯನ್ನು ಸೇರಿ ಬಿಸಿ ಚಹಾ ಸೇವಿಸುವ ಸುಖ ಹೇಳುವಂತದ್ದಲ್ಲ.. ಅದರಲ್ಲೂ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲ ಶುರುವಾಯಿತೆಂದರೆ ಸಾಕು ಪ್ರಕೃತಿ ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಸೆಳೆಯತೊಡಗುತ್ತದೆ.

ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಅಬ್ಬರಿಸುವ ಸಮುದ್ರದ ಕಡಲು ನಮ್ಮೊಡನೆ ಏನನ್ನೋ ಹೇಳಬಯಸುತ್ತಿವೆ ಎನ್ನುವಂತೆ ಭಾಸವಾಗುವುದು ಸುಳ್ಳಲ್ಲ. ಸೂತ್ತಲೂ ಕಾರ್ಮೋಡಗಳು ತಣ್ಣನೆಯ ಗಾಳಿ ಸಿಡಿಲು ಗುಡುಗುಗಳ ಆರ್ಭಟದಿ ಸುರಿಯುವ ಮಳೆಗೆ ಮನಸ್ಸು ಮುದಗೊಳ್ಳುವುದರ ಜೊತೆಗೆ ಏನೋ ಒಂದು ರೀತಿಯ ಸಡಗರವನ್ನು ನಮ್ಮೊಳಗೆ ಉಂಟು ಮಾಡುತ್ತದೆ ಎಂದರೆ ತಪ್ಪಾಗಲಾರದು. 
 
ಪಟ್ಟಣಕ್ಕೆ ಹೋಲಿಸಿದರೆ ಮಳೆಯ ಮಜಾವನ್ನು ಅನುಭವಿಸಬೇಕು ಎಂದರೆ ಅದು ಸಾಧ್ಯವಾಗದ ಮಾತು. ನಗರ ಪ್ರದೇಶಗಳಲ್ಲಿ ಕಂಡುಬರುವ ಟ್ರಾಫ್ರಿಕ್ ಜಂಜಾಟ, ಕಾಂಕ್ರಿಟ್ ಕಾಡುಗಳ ಮಧ್ಯೆ ಇರುವ ರಸ್ತೆಗಳಲ್ಲಿ ಮಳೆ ಬಂತೆಂದರೆ ಸಾಕು ಹಿಡಿ ಶಾಪ ಹಾಕಬೇಕಾಗುವುದೇ ಹೊರತು ಮಳೆಯ ಆನಂದವನ್ನು ಪಡೆಯುವುದು ಅಸಾಧ್ಯ. ನಮಗೆ ಮಳೆಯ ಸೊಬಗು ಸಿಗುವುದು ಮಲೆನಾಡು ಮತ್ತು ಕರಾವಳಿ ಭಾಗದಲ್ಲೇ ಏಕೆಂದರೆ ಅಲ್ಲಿನ ವಾತಾವರಣ, ಶುದ್ಧ ಗಾಳಿ, ಸುತ್ತಲಿನ ಪ್ರಕೃತಿ, ಮಸುಕಾದ ಮಂಜು, ಸೌಂದರ್ಯದ ನೈಜ ಅನುಭೂತಿ ಸಿಗುವುದು ಈ ಪ್ರದೇಶಗಳಲ್ಲಿ ಎಂದೇ ಹೇಳಬಹುದು ಇಲ್ಲಿನ ಸುಂದರತೆಗೆ ಮರುಳಾಗದವರು ಯಾರು ಇಲ್ಲ ಅದಕ್ಕಾಗಿಯೇ ಹಲವಾರು ಸಿನೆಮಾಗಳಲ್ಲಿ ಇಲ್ಲಿನ ಸೊಬಗನ್ನು ಸೆರೆಹಿಡಿಯಲು ಚಿತ್ರೀಕರಣವನ್ನು ಮಾಡಲಾಗುತ್ತದೆ. 
 
ಮಲೆನಾಡಿನ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದರೆ ಸಾಕು ಸುತ್ತಲಿನ ಹಸಿರು ಕಣ್ಣಿಗೆ ಮುದ ನೀಡಲು ಸುತ್ತಲಿನ ಪ್ರದೇಶ ತಯಾರಾಗುತ್ತದೆ ಬೆಟ್ಟ ಗುಡ್ಡಗಳು ಹಸಿರು ಸೀರೆ ಉಟ್ಟ ಚೆಲುವೆಯ ಹಾಗೆ ಸಿಂಗಾರಗೊಳ್ಳುತ್ತದೆ. ಜಲಪಾತಗಳು ದುಮ್ಮಿಕ್ಕಿ ಹರಿಯುತ್ತೊಡಗುತ್ತವೆ ಅದನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ಕಡೆಗೆ ಪ್ರಯಾಣ ಬೆಳೆಸುವುದು. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ತುಂಬಿ ಹರಿಯುವ ನದಿಗಳು, ಸಮುದ್ರ ತನ್ನದೇ ಆದ ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ. ಅಷ್ಟೇ ಅಲ್ಲ, ಮಳೆ ಬೀಳುವ ಅವಧಿಯಲ್ಲಿ ಕಡಲ ತಡಿಯಲ್ಲಿ ಸಂಗಾತಿಯೊಡನೆ ಹೆಜ್ಜೆಗಳನ್ನು ಸೇರಿಸಿ ನಡೆಯುವುದು ಕಿನಾರೆಯಲ್ಲಿ ಮಳೆಯಲ್ಲಿ ನೆನೆಯುವುದು ಇವೆಲ್ಲಾ ಮನಸಿಗೆ ಸಂತಸವನ್ನುಂಟು ಮಾಡುತ್ತದೆ.
webdunia
ಮಳೆಗಾಲ ಬಂತೆಂದರೆ ಸಾಕು ಮನೆಯಲ್ಲಿ ಅದೇನೋ ಸಡಗರ, ತರತರಹದ ತಿನಿಸುಗಳನ್ನು ತಯಾರಿಸುವುದು ಸಾಮಾನ್ಯ ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಗಾಲಕ್ಕೆಂದೇ ಸಾಕಷ್ಟು ವಿಧ ವಿಧವಾದ ತಿನಿಸುಗಳನ್ನು ತಯಾರಿಸುತ್ತಾರೆ. ಮಾಂಸ ಪ್ರಿಯರಿಗೆ ಮಳೆಗಾಲ ಬಂತು ಎಂದರೆ ಸಾಕು ವಿವಿಧ ಬಗೆಯ ಭಕ್ಷ್ಯ ಭೋಜನಗಳು ಮನೆಗಳಲ್ಲಿ ಸಿದ್ಧವಾಗುತ್ತವೆ. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತರಹೇವಾರು ಮೀನುಗಳು ಲಭ್ಯವಾಗುತ್ತವೆ ಅದು ಎಲ್ಲಾ ಅವಧಿಯಲ್ಲೂ ಲಭ್ಯವಿರುವುದಿಲ್ಲ ಹಾಗಾಗಿ ಅಂತಹ ಮೀನುಗಳಿಗೆ ಬಾರಿ ಬೇಡಿಕೆ ಇದ್ದು ಅದರ ರುಚಿಯನ್ನು ಸವಿಯಬೇಕು ಎಂದರೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಬೇಕು. ಅಷ್ಟೇ ಅಲ್ಲ ಮಳೆಗಾಲದ ಅವಧಿಯಲ್ಲಿ ಮಲೆನಾಡಿನ ಹಲವೆಡೆ ವಿಶೇಷವಾಗಿ ಮಾಂಸದೂಟವನ್ನು ತಯಾರಿಸುತ್ತಾರೆ. ಅಲ್ಲದೇ ಮಳೆಗಾಲದಲ್ಲಿ ಹಣ್ಣಿನ ವೈನ್‌ಗಳನ್ನು ಸಹ ತಯಾರಿಸುವುದು ವಾಡಿಕೆ. ಅವೆಲ್ಲದರ ನಡುವೆ ಕರಿದ ಪದಾರ್ಥಗಳಾದ ಚಕ್ಕುಲಿ, ಹಲಸಿನ ಚಿಪ್ಸ್‌ಗಳು, ನಿಪ್ಪಟ್ಟು, ಸಬ್ಬಕ್ಕಿ ಸಂಡಿಗೆ ಅರಳು ಸಂಡಿಗೆ, ನುಚ್ಚಿನುಂಡೆ ಹೀಗೆ ತರತರಹ ತಿನಿಸುಗಳನ್ನು ಮಳೆಗಾಲಕ್ಕಾಗಿಯೇ ಸಿದ್ಧಪಡಿಸಲಾಗುತ್ತದೆ.
 
ಮಲೆನಾಡಿನಲ್ಲಿ ಮಳೆಗಾಲದ ಅವಧಿಯಲ್ಲಿ ಕಾಡಿನಲ್ಲಿ ಸಿಗುವ ಅಣಬೆಗಳಿಗೆ ಬಾರಿ ಬೇಡಿಕೆ ಇದ್ದು ಇದರಿಂದ ವಿವಿಧ ರೀತಿಯ ಅಡುಗೆಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಸುವರ್ಣಗಡ್ಡೆ, ಬಿದಿರಿನ ಕಳಲೆಯಿಂದ ಮಾಡಿರುವ ಭಕ್ಷ್ಯಗಳು ಮತ್ತು ಕೆಸುವಿನ ದಂಟು ಮತ್ತು ಎಲೆಯಿಂದ ತಯಾರಿಸುವ ಆಹಾರವನ್ನು ಸವಿಯಲು ಮಳೆಗಾಲ ಒಂದು ಉತ್ತಮ ಸಮಯ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ಸಂಜೆ ಸಮಯಕ್ಕೆ ಎಂದೇ ಹಲವಾರು ರೀತಿಯ ಬಜ್ಜಿಗಳನ್ನು ತಯಾರಿಸುತ್ತಾರೆ ಇದು ಚಹಾದೊಂದಿಗೆ ಉತ್ತಮ ಕಾಂಬಿನೇಷನ್ ಎಂದೇ ಹೇಳಬಹುದು.
 
ಅದಲ್ಲದೇ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಂಬಳ, ಕೆಸರುಗದ್ದೆ ಆಟ ಹೀಗೆ ಮೊದಲಾದ ದೇಸಿ ಆಟಗಳನ್ನು ಮಲೆನಾಡು ಮತ್ತು ಕರಾವಳಿ ಭಾಗದ ಹಳ್ಳಿ ಪ್ರದೇಶಗಳಲ್ಲಿ ನಾವು ಕಾಣಬಹುದು. ಈ ಅವಧಿಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ನೀರಿನ ಒರತೆಗಳು, ನದಿ ಮತ್ತು ಸಮುದ್ರದ ದಂಡೆಗಳಲ್ಲಿ ಕುಳಿತು ಗಾಳ ಹಾಕುವ ದೃಶ್ಯಗಳು, ಗದ್ದೆಗಳಲ್ಲಿ ಕಂಡುಬರುವ ಏಡಿ, ಗಿಡಗಳ ಮೇಲೆ ಅತ್ತಿಂದಿತ್ತ ಹಾರಾಡುವ ಪಾತರಗಿತ್ತಿಗಳು ನಿಮ್ಮನ್ನು ಬಾಲ್ಯದ ತೆಕ್ಕೆಗೆ ನೂಕುವುದರ ಜೊತೆಗೆ ಪ್ರೇಮಿಗಳಿಗೆ, ಛಾಯಾಗ್ರಾಹಕರಿಗೆ, ಕವಿಗಳಿಗೆ ಮಲೆನಾಡಿನ ಸುಂದರ ತಾಣಗಳು ನಿಮ್ಮ ನೆನಪಿನ ಬುತ್ತಿಯನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಇವೆಲ್ಲಾ ಹೇಳಿದ ಮೇಲೆ ಯಾವ ಪ್ರದೇಶಕ್ಕೆ ಹೋದರೆ ಸೂಕ್ತ ಎಂಬ ಕೂತುಹಲ ನಿಮಗೂ ಇರಬಹುದು ಅದಕ್ಕೆಂದೇ ಕೆಲವು ಪ್ರದೇಶಗಳು ನಿಮಗಾಗಿ - 
webdunia

 
ಮಲೆನಾಡಿನ ಕಡೆಯಲ್ಲಿ ಪ್ರಯಾಣ ಬೆಳೆಸಬೇಕು ಎಂದಾದರೆ ಮಡಿಕೇರಿಯಲ್ಲಿ ಭಾಗಮಂಡಲ, ಮಂದಾಲ್‌ಪಟ್ಟಿ, ಪುಷ್ಪಗಿರಿ ಬೆಟ್ಟ, ಮಕ್ಕಳಗುಡಿ ಬೆಟ್ಟ, ಶಾಂತಳ್ಳಿ, ಕುಂದಳ್ಳಿ, ಕುಮಾರಳ್ಳಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀವು ಪ್ರಯಾಣಿಸುತ್ತೀರಿ ಎಂದಾದರೆ ಮುಳ್ಳಯ್ಯನಗಿರಿ, ಕುದುರೆಮುಖ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕೊಟ್ಟಿಗೆಹಾರ, ಶೃಂಗೇರಿ ಅರಣ್ಯ ಪ್ರದೇಶ, ಕಲ್ಲತ್ತಗಿರಿ, ಮೂಡಿಗೆರೆ ಉತ್ತಮವಾಗಿರುತ್ತದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಪ್ರಯಾಣಿಸಬೇಕು ಎಂದು ಬಯಸಿದಲ್ಲಿ ಗೋಕರ್ಣ, ಯಾಣ, ಶಿರಸಿ, ಭಟ್ಕಳ, ಕೋಗಾರಘಟ್ಟ, ಕರಿಕಾನ ಪರಮೇಶ್ವರಿ, ದಾಂಡೇಲಿ, ಸಾತೊಡ್ಡಿ, ಜೇನುಕಲ್ಲು, ಮಾಗೋಡು, ಭಗವತಿ ಕಾಡುದೇವಿಮನೆ ಘಟ್ಟ ನೋಡುವ ಜೊತೆಗೆ ವಜ್ರಳ್ಳಿ ಜಲಪಾತ ಮತ್ತು ಮಲ್ಪೆ, ಕಾಪು, ಕೂಡ್ಲು ತೀರ್ಥ, ಬರ್ಕಣ, ಬೆಳ್ಕಲ್ ತೀರ್ಥ, ಅರಿಶಿನಗುಂಡಿ, ಜೋಮ್ಲು ತೀರ್ಥ, ಕೋಸಳ್ಳಿ ಜಲಪಾತಗಳು ಮಳೆಗಾಲದ ನಿಜ ಸೌಂದರ್ಯವನ್ನು ದರ್ಶನವನ್ನು ನೀವು ಪಡೆಯಬಹುದು. ಹಾಸನ ಜಿಲ್ಲೆಯಲ್ಲಿ ನೋಡುವುದಾದರೆ ಸಕಲೇಶಪುರವನ್ನು ಮರೆಯಲೇಬಾರದು. ರೊಟ್ಟಿಕಲ್ಲು, ಬೆಟ್ಟದಮನೆ, ಮರಗುಂದ, ಮಂಜರಾಬಾದ್ ಕೋಟೆ, ಕೆಂಪುಹೊಳೆ, ಜೇನುಕಲ್ಲು ಗುಡ್ಡ ಇವೆಲ್ಲವೂ ಇಲ್ಲಿನ ಅದ್ಭುತ ಪಾಕೃತಿಕ ಸೌಂದರ್ಯದ ರಸದೂಟವನ್ನು ನಿಮಗೆ ಊಣಬಡಿಸುತ್ತವೆ. ಅಷ್ಟೇ ಅಲ್ಲ ಜಲಪಾತದ ತವರೂರು ಎಂದೇ ಹೆಸರುವಾಸಿಯಾಗಿರುವ ಶಿವಮೊಗ್ಗದಲ್ಲಿ ಸಾಕಷ್ಟು ಪ್ರದೇಶಗಳಿದ್ದು ಆಗುಂಬೆ ಮತ್ತು ಜೋಗ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು ಅಲ್ಲದೇ ಇಲ್ಲಿನ ಸುತ್ತಮುತ್ತಲ ಕಾಡುಗಳು ಪ್ರವಾಸಿಗರನ್ನು ಮನಮೋಹಕಗೊಳಿಸುತ್ತವೆ ಅಷ್ಟೇ ಅಲ್ಲ ಗುಡವಿ ಪಕ್ಷಿಧಾಮ, ಕೆಳದಿ, ಸಕ್ಕರೆ ಬಯಲು ಆನೆ ಶಿಬಿರ, ಕವಲೆದುರ್ಗ, ಕೊಡಚಾದ್ರಿಗಳಲ್ಲಿ ಮಳೆಯ ಮಜವನ್ನು ಆನಂದಿಸಬಹುದು
webdunia
ಒಟ್ಟಿನಲ್ಲಿ ಬಾನಲ್ಲಿ ನಡೆಯುವ ಸಡಗರವು ಮುತ್ತಾಗಿ ಸುರಿಯುವ ಸೋನೆ ಮಳೆಯನ್ನು ಆಸ್ವಾದಿಸಲು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುವುದು ಅವಶ್ಯಕವೆಂದೇ ಹೇಳಬಹುದು. ನೀವೂ ಒಮ್ಮೆ ಭೇಟಿ ಕೊಡಿ ಮಳೆಯ ಮಂಜಿನ ಹನಿಗಳೊಂದಿಗಿನ ನಿಮ್ಮ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ ಹೈಕೋರ್ಟ್