Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿರ್ಜಾನ್ ಕೋಟೆ ಬಗ್ಗೆ ನಿಮಗೆಷ್ಟು ಗೊತ್ತು?

ಮಿರ್ಜಾನ್ ಕೋಟೆ ಬಗ್ಗೆ ನಿಮಗೆಷ್ಟು ಗೊತ್ತು?

ಗುರುಮೂರ್ತಿ

ಬೆಂಗಳೂರು , ಗುರುವಾರ, 28 ಡಿಸೆಂಬರ್ 2017 (13:18 IST)
ಕರ್ನಾಟಕ ರಾಜ್ಯ ಒಂದು ಸಾಂಸ್ಕೃತಿಕ ತವರು. ಇದು ಭಾರತದ ಇತಿಹಾಸದಲ್ಲಿ ತನ್ನದೇ ಆದ ಕೊಡುಗೆಯನ್ನು ದೇಶಕ್ಕೆ ನೀಡಿದ ಹಿರಿಮೆ ಈ ರಾಜ್ಯಕ್ಕಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ನಾಡಿನ ಚರಿತ್ರೆಯನ್ನು ನೀವು ಕೇಳಿರುತ್ತಿರಿ. ಇತಿಹಾಸದ ಪುಟವನ್ನು ನಾವು ತಿರುವಿದಾಗ ಅನೇಕ ರಾಜರು ಸಾಮಂತರು ಕರ್ನಾಟಕವನ್ನು ಆಳಿರುವುದನ್ನು ನೀವು ಓದಿರುತ್ತಿರಿ. 
ಅವರ ಆಳ್ವಿಕೆಯ ಕಾಲದಲ್ಲಿ ರಾಜ್ಯ ಹಾಗಿತ್ತು ಹೀಗಿತ್ತು ಎನ್ನೋ ವಿಷಯಗಳು ನಮ್ಮ ಕಿವಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದನ್ನು ನೋಡಲು ನಮಗೆ ಸಾಧ್ಯವಿಲ್ಲವಲ್ಲ ಎಂಬ ಕೊರಗು ನಮ್ಮಲ್ಲೂ ಆಗಾಗ ಮೂಡುವುದು ಸಹಜ. ಅಲ್ಲದೇ ಅವರ ರಾಜ್ಯ, ಕೋಟೆ ಹೇಗಿರಬಹುದು ಎಂಬ ಕೂತುಹಲಕ್ಕೆ ಕೋಟೆ ಕೊತ್ತಲುಗಳು, ಹಳೆಯ ಶಾಸನಗಳು, ನಾಣ್ಯಗಳು ಗ್ರಂಥಗಳು ಹೀಗೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ. 
 
ಆದರೆ ನಮ್ಮಲ್ಲಿ ಕೋಟೆಗಳೇನೋ ಸಾಕಷ್ಟಿವೆ ಆದರೆ ಅವುಗಳನ್ನು ನೋಡಬೇಕು ಅದರ ಸೌಂದರ್ಯವನ್ನು ಆಸ್ವಾಹಿಸಬೇಕು ಎಂದರೆ ಅಂತಹ ಕೋಟೆಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ಕೆಲವು ಕೋಟೆಗಳು ಅಳಿವಿನ ಅಂಚಿನಲ್ಲಿದ್ದರೆ ಇನ್ನು ಕೆಲವು ಕೋಟೆಗಳು ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಗತ ವೈಭವದ ವೈಭೋಗವನ್ನು ಸಾರುತ್ತಿದೆ. ಅಂತಹ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯು ಒಂದು.
 
ಕೋಟೆಗೆ ದಾರಿ
webdunia
ಮಿರ್ಜಾನ್ ಕೋಟೆಯು ಉತ್ತರಕನ್ನಡದ (ಕಾರವಾರ) ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿದೆ. ಗೋಕರ್ಣದಿಂದ ಸುಮಾರು 23 ಕಿಮಿ ದೂರದಲ್ಲಿರುವ ಮಿರ್ಜಾನ್ ಕೋಟೆ, ಕುಮಟಾ ಪಟ್ಟಣದಿಂದ 10.5 ಕಿಮಿ ದೂರದಲ್ಲಿದೆ. ನಾವು ಕಾಣಬಹುದಾದ ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಇದು ಕೂಡಾ ಒಂದಾಗಿದೆ. ಇದು ಅಘನಾಶಿನಿ ನದಿಯ ತಟದಲ್ಲಿದ್ದು ಅದರಾಚೆಗೆ ಅರಬ್ಬೀ ಸಮುದ್ರವನ್ನು ಹೊಂದಿದೆ.
 
 
ಕೋಟೆಯ ಭೌಗೋಳಿಕ ಲಕ್ಷಣಗಳು
webdunia
ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಈ ಕೋಟೆಯು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣವಾಗಿದ್ದು ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಇದರಲ್ಲಿ ಒಂದು ಮುಖ್ಯ ದ್ವಾರಗಳಿದ್ದು ಮೂರು ಉಪ ದ್ವಾರಗಳು ಕಂಡುಬರುತ್ತವೆ. ಕೋಟೆಯ ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನು ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ ಹಾಲ್, ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸಿದಿಯಂತಹ ಅವಶೇಷಗಳು ಮತ್ತು ಈ ಕೋಟೆಯಲ್ಲಿ 9 ಭಾವಿಗಳನ್ನು ನಾವು ಕಾಣಬಹುದಾಗಿದೆ. ಅದಲ್ಲದೇ ಕೋಟೆಯ ಧ್ವಜ ಸ್ತಂಭ, ಕಾವಲು ಗೋಪುರ ಅಲ್ಲಿಂದ ಕಾಣುವ ಅಘನಾಶಿನಿ ನದಿ ನೋಡುಗರನ್ನು ಆಕರ್ಷಿಸುವುದಂತು ಸುಳ್ಳಲ್ಲ. ಮೆಟ್ಟಿಲುಗಳ ನಿರ್ಮಾಣವು ಆಕರ್ಷಕವಾಗಿದ್ದು ಪ್ರತಿಯೊಂದು ದ್ವಾರವು ಹಾಗೂ ಕೋಟೆಯ ಕಲ್ಲುಗಳು ಜನರನ್ನು ಆಕರ್ಷಿಸುತ್ತದೆ. ಅಲ್ಲದೇ ಕೋಟೆಯ ನಿರ್ಮಾಣವು ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಸೌಕರ್ಯವನ್ನು ಈ ಕೋಟೆ ಹೊಂದಿರುವುದಕ್ಕೆ ಸಾಕ್ಷಿ ಲಭಿಸುತ್ತದೆ.
 
 
ಇತಿಹಾಸದಲ್ಲಿ ಮಿರ್ಜಾನ್ ಕೋಟೆ 
webdunia
ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿದ್ದು, ಇಬ್ನಬಟೂಟ ಎಂಬ ನವಾಯತ ರಾಜ 1200 ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದನೆಂದು ಹೇಳುತ್ತಾರೆ. ಹೆಚ್ಚಿನವರ ಪ್ರಕಾರ ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತು ಸ್ಥಳೀಯವಲಯದಲ್ಲಿದೆ. ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ.
 
ವ್ಯಾಪಾರ
ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಬೆಳೆಯುವ ಅಡಿಕೆ, ಕಾಳುಮೆಣಸು, ಇಲ್ಲಿ ತಯಾರಿಸುವ ಉಪ್ಪು ಮುಂತಾದ ಸಾಂಬಾರ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ರಪ್ತಾಗುತ್ತಿದ್ದವು. ಇದರಿಂದಾಗಿ ಚೆನ್ನಾಭೈರಾದೇವಿಯನ್ನು ಪೋರ್ಚುಗೀಸರು ಕಾಳುಮೆಣಸಿನ ರಾಣಿ ಎಂದೂ ಕರೆಯತೊಡಗಿದರು.
 
ಈಗಿನ ಸ್ಥಿತಿ
webdunia
ಈ ಕೋಟೆಯು ಕರ್ನಾಟಕದಲ್ಲಿ ಕಂಡುಬರುವ ಇತರ ಕೋಟೆಗಳಿಗಿಂತ ಭಿನ್ನವಾಗಿದ್ದು ಇಂದಿಗೂ ಗಟ್ಟಿಮುಟ್ಟಾಗಿದೆ ಇತ್ತೀಚಿಗೆ ಇದನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ಒಳಪಡಿಸಿಕೊಂಡಿದ್ದು, ಪ್ರಾಚ್ಯ ವಸ್ತು ಇಲಾಖೆ ಅಡಿಯಲ್ಲಿ ಉತ್ಖನನ ಮಾಡಲಾಗುತ್ತಿದೆ. ಕೋಟೆಯಲ್ಲಿ ಹಾನಿಯಾಗಿರುವ ಕೆಲವು ಪ್ರದೇಶಗಳನ್ನು ಈಗಾಗಲೇ ಸರಿಪಡಿಸುವ ಕಾರ್ಯಸಾಗುತ್ತಿದೆ. ಕೋಟೆಯ ಹೊರನೋಟವು ನಯನಮನೋಹರವಾಗಿದ್ದು ಮಳೆಗಾಲದಲ್ಲಿ ಇದರ ಸೊಬಗು ಇನ್ನಷ್ಟು ಹೆಚ್ಚುತ್ತದೆ. ಮಳೆಗಾಲದ ಅವಧಿಯಲ್ಲಿ ಸುತ್ತಲಿನ ಗೋಡೆಗಳು ಹಸಿರು ಸೀರೆ ಉಟ್ಟ ನವ ವಧುವಿನಂತೆ ಕಂಗೊಳಿಸುತ್ತವೆ. ಇದು ಉತ್ತಮವಾದ ಚಿತ್ರಿಕರಣ ಸ್ಥಳವಾಗಿದ್ದು (ಶೂಟಿಂಗ್ ಸ್ಪಾಟ್) ಹಲವಾರು ಕನ್ನಡ ಚಿತ್ರ ಸೇರಿದಂತೆ ಉಳಿದ ಭಾಷೆಯ ಚಿತ್ರಗಳಲ್ಲೂ ಸಹ ಈ ಸ್ಥಳವನ್ನು  ಚಿತ್ರಿಕರಿಸಲಾಗಿದೆ.
 
ಭೇಟಿ ಸಮಯ 
ಮಳೆಗಾಲದ ಪ್ರಾರಂಭದ ಅವಧಿಯಲ್ಲಿ ಈ ಕೋಟೆಯನ್ನು ವೀಕ್ಷಣೆ ಮಾಡಲು ಉತ್ತಮ ಸಮಯವಾಗಿದ್ದು, ಅಕ್ಟೋಬರ್ ಹಾಗೂ ನಂತರದ ದಿನಗಳಲ್ಲೂ ಈ ಸ್ಥಳಕ್ಕೆ ತೆರೆಳಬಹುದಾಗಿದೆ. ಮಳೆಗಾಲದ ಅವಧಿಯಲ್ಲಿ ಈ ಸ್ಥಳದಲ್ಲಿ ಉಳಿಯಲು ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲದಿರುವುದರಿಂದ ಕುಟುಂಬ ಸಮೇತರಾಗಿ ಹೋಗಲು ಆ ಸಮಯ ಅಷ್ಟು ಉತ್ತಮವಾಗಿರುವುದಿಲ್ಲ. 
 
ಉಟೋಪಚಾರ
ಕೋಟೆಯಿಂದ 1 ಕಿಮಿ ದೂರದಲ್ಲಿ ರಾಷ್ಟೀಯ ಹೆದ್ದಾರಿ ಇರುವ ಕಾರಣ ಉಟೋಪಚಾರಕ್ಕೆ ಮುಖ್ಯ ರಸ್ತೆಗೆ ಬರಬೇಕಾಗುತ್ತದೆ ಕೋಟೆಯ ಬಳಿ ಯಾವುದೇ ಹೊಟೇಲ್‌ಗಳು ಲಭ್ಯವಿಲ್ಲ ಹಾಗಾಗಿ ಕೋಟೆಗೆ ಹೋಗುವಾಗ ನೀರಿನ ಬಾಟಲಿಗಳು ತಿನಿಸುಗಳನ್ನು ಒಯ್ಯುವುದು ಸೂಕ್ತ ನೀವು ವಾಹನಗಳಲ್ಲಿ ತೆರಳಿದ ಸಂದರ್ಭದಲ್ಲಿ ನೀವು ಮುಖ್ಯ ರಸ್ತೆಗೆ ಸುಲಭವಾಗಿ ಹೋಗಬಹುದು.
 
 
ನೀವೇನಾದರೂ ಗತ ಕಾಲದ ವೈಭೋಗವನ್ನು ನೋಡಿ ಆನಂದಿಸಬೇಕು ಅದರ ಕುರಿತು ತಿಳಿದುಕೊಳ್ಳಬೇಕು ಎನ್ನೋ ಕುತೂಹಲದ ಜೊತೆಗೆ ಕಡಿಮೆ ಅವಧಿಯಲ್ಲಿ ಉತ್ತಮ ಸ್ಥಳದಲ್ಲಿ ಕುಟುಂಬದೊಂದಿಗೆ ವೇಳೆಯನ್ನು ಕಳೆಯಬೇಕು ಎನಿಸಿದರೆ ಈ ಸ್ಥಳ ನಿಮಗೆ ಉತ್ತಮವೆಂದೇ ಹೇಳಬಹುದು. ಒಟ್ಟಿನಲ್ಲಿ ಇತಿಹಾಸ ಪುಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈ ಕೋಟೆಯನ್ನು ಸರಕಾರ ಅಭಿವೃದ್ದಿಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದರ ಮೆರಗು ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಚೋಪ್ರಾಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತಾ…? ಕೇಳಿದ್ರೆ ಹುಬ್ಬೇರಿಸುತ್ತೀರಿ!