Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಲಪಾತಗಳ ತವರೂರು ಕರ್ನಾಟಕದ ಕಾಶ್ಮೀರ!

ಜಲಪಾತಗಳ ತವರೂರು ಕರ್ನಾಟಕದ ಕಾಶ್ಮೀರ!

ಗುರುಮೂರ್ತಿ

ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (13:45 IST)
ಮಳೆಗಾಲದಲ್ಲಿ ಮಳೆಯಲಿ ನೆನೆಯುವುದೇ ಒಂದು ತಹರದ ಖುಷಿ ಅದರಲ್ಲೂ ಚಿಕ್ಕ ಪುಟ್ಟ ನದಿ ತೊರೆಗಳಿದ್ದರಂತು ಮುಗಿದೇ ಹೋಯಿತು ಅದರ ಸೌಂದರ್ಯ ಸೊಬಗು ವೈಯ್ಯಾರಗಳನ್ನು ನೋಡುತ್ತಾ ದಿನ ಕಳೆಯುವುದೇ ನಮಗೆ ತಿಳಿಯುವುದಿಲ್ಲ ಅದರಲ್ಲೂ ತುಂಬಿ ಹರಿಯುವ ಜಲಪಾತಗಳಿದ್ದರೆ ನಮಗೆ ಇನ್ನಷ್ಟು ಆನಂದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಪ್ರಕೃತಿಯೇ ಹಾಗೆ ನಮಗೆ ಅರಿವಿಲ್ಲದೇ ನಮ್ಮೊಳಗೆ ಬೆರೆತಿರುತ್ತದೆ. ತನ್ನ ಮಡಿಲಲ್ಲಿ ಅನೇಕ ಕೌತುಕುತೆಗಳನ್ನು ಇರಿಸಿ ಹೆಜ್ಜೆಹೆಜ್ಜೆಗೂ ವಿಸ್ಮಯವನ್ನು ಸೃಷ್ಟಿಸುತ್ತಾ ಅದರ ನಡುವೆಯೇ ನಮಗೆ ಬೇಕಾದ ಎಲ್ಲವನ್ನು ನೀಡಿ ನಮ್ಮನ್ನು ಪೋಷಿಸುವುದಲ್ಲದೇ ತನ್ನದೇ ಸೃಷ್ಟಿಯಿಂದ ನಮ್ಮನ್ನು ಇನ್ನಷ್ಟು ಚಕಿತಗೊಳಿಸುತ್ತದೆ. ಅದರಲ್ಲಿ ಈ ಜಲಪಾತಗಳು ಒಂದು. ಪ್ರವಾಸಿಗರಿಗೆ ರಸದೌತಣ ನೀಡುವ ಈ ಜಲಪಾತಗಳು ನೋಡುಗರನ್ನು ರೋಮಾಂಚನಗೊಳಿಸುವುದಂತೂ ಸುಳ್ಳಲ್ಲ. ಈ ಎಲ್ಲಾ ಜಲಪಾತಗಳು ಒಂದೇ ಕಡೆ ಇದ್ದರೆ ಹೇಗಿರಬಹುದು ಎನ್ನುವ ಕೂತುಹಲ ನಿಮಗಿದೆಯೇ ಇಲ್ಲಿದೆ ವಿವರ.
 
ಉತ್ತರ ಕನ್ನಡ (ಕಾರವಾರ) ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆಯಾಗಿದ್ದು ಮಲೆನಾಡು ಮತ್ತು ಸಹ್ಯಾದ್ರಿಗಳಿಗೆ ಹೊಂದಿಕೊಂಡು ತನ್ನ ಕಲೆ ಸಂಸ್ಕೃತಿ ಹಾಗೂ ಪ್ರವಾಸೋದ್ಯಮಗಳಿಂದ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಈ ಜಿಲ್ಲೆಯು ಕರ್ನಾಟಕದ ಕಾಶ್ಮೀರ ಎನ್ನುವ ಬಿರುದನ್ನು ಹೊಂದಿರುವುದರ ಜೊತೆಗೆ ಜಲಪಾತಗಳ ತವರು ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಭವ್ಯ ಪರ್ವತ ಸಿರಿಗಳಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ಮಹತ್ವವನ್ನು ಪಡೆದಿದ್ದು ಹಲವಾರು ಗಮ್ಯವಾದಂತಹ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನೋಡಬಹುದಾಗಿದೆ.
 
ಉಂಚಳ್ಳಿ ಜಲಪಾತ: 
ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ ಇದಾಗಿದ್ದು ಇದನ್ನು ಲಶಿಂಗ್ಟನ್ ಜಲಪಾತ ಎಂತಲೂ ಕರೆಯುತ್ತಾರೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 30 ಕಿಮೀ ದೂರದಲ್ಲಿದ್ದು ಸಿದ್ಧಾಪುರದಿಂದ 19 ಕಿಮೀ ದೂರದಲ್ಲಿದೆ. ಉಂಚಳ್ಳಿ ಗ್ರಾಮದ ಬಳಿ ಇರುವುದರಿಂದ ಇದನ್ನು ಉಂಚಳ್ಳಿ ಜಲಪಾತ ಎಂದು ಪ್ರಚಲಿತವಾಗಿದೆ. ಇಲ್ಲಿ ಸುಮಾರು 381 ಅಡಿಗಳಷ್ಟು ಎತ್ತರದಿಂದ ನೀರು ಧುಮುಕುವುದನ್ನು ನಾವು ಕಾಣಬಹುದಾಗಿದೆ. 
 
ಮಾಗೋಡು ಜಲಪಾತ
webdunia
ಮಾಗೋಡು ಜಲಪಾತವು ಬೆಡ್ತಿ ನದಿಯಿಂದ ರೂಪಿತವಾಗಿದೆ. 200 ಮೀ. ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುವ ಮಾಗೋಡು ಜಲಪಾತವು ಎರಡು ಕವಲುಗಳನ್ನು ಹೊಂದಿರುವ ಜಲಪಾತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಿಂದ 17 ಕಿ.ಮೀ ದೂರದಲ್ಲಿದೆ ಮಳೆಗಾಲದೂದ್ದಕ್ಕೂ ಹಸಿರಿನಿಂದ ಕಂಗೊಳಿಸುವ ಈ ತಾಣವು ಮಳೆಗಾಲದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
 
ಸಾತೋಡಿ ಜಲಪಾತ
webdunia


ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಇನ್ನೊಂದು ಜಲಪಾತವೇ ಸಾತೋಡಿ ಜಲಪಾತ ಇದನ್ನು ಅಮೆರಿಕಾದ ಚಿಕ್ಕ ನಯಾಗರ ಎಂತಲೂ ಕರೆಯುತ್ತಾರೆ ಸೂತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳು ಮುಗಿಲೆತ್ತರದ ಮರಗಳ ನಡುವೆ ಇದು ನೋಡುಗರಿಗೆ ಉಲ್ಲಾಸವನ್ನು ನೀಡುತ್ತದೆ. ಇದು ಹಲವು ಝರಿ ತೊರೆಗಳ ನೀರಿನಿಂದ ರಚಿತವಾಗಿದ್ದು ಸುಮಾರು 15 ಮೀಟರ್ ಎತ್ತರದಿಂದ ಧುಮುಕುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ.
 
ಬೆಣ್ಣೆಹೊಳೆ ಜಲಪಾತ
webdunia

ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಸುಮಾರು 31 ಕಿ.ಮೀ ಸಾಗಿದರೆ ನಮಗೆ ಹೆಬ್ರೆ ಗ್ರಾಮ ಸಿಗುತ್ತದೆ ಅಲ್ಲಿಂದ 15 ನಿಮಿಷ ಕಾಲುದಾರಿಯಲ್ಲಿ ನಡೆದರೆ ನಮಗೆ ಸಿಗುವುದೇ ಈ ಬೆಣ್ಣೆ ಹೊಳೆ ಜಲಪಾತ. ಈ ಪ್ರದೇಶವು ದಟ್ಟಿ ಅರಣ್ಯವಾಗಿದ್ದು ಜುಳುಜುಳು ನಾದದೊಂದಿಗೆ ಬೆಣ್ಣೆ ಹೊಳೆ ಜಲಪಾತ ಸ್ವಾಗತಿಸುತ್ತದೆ. ಇಲ್ಲಿ ವಾಹನ ಸಂಚಾರ ವಿರಳವಾಗಿದ್ದು ಅಗತ್ಯವಾದ ವಸ್ತುಗಳನ್ನು ತೆಗೆದುಕೊಂಡು ಅಲ್ಲಿಗೆ ಹೋಗುವುದು ಸೂಕ್ತ ಮಾನ್ಸೂನ್ ಆರಂಭದಿಂದ ನವೆಂಬರ್ ತಿಂಗಳಿನವರೆಗೆ ಈ ಪ್ರದೇಶದಲ್ಲಿ ಉಂಬಳ, ತಿಗಣೆಗಳ ಕಾಟ ಹೆಚ್ಚಿರುತ್ತದೆ ಕಾಲು ದಾರಿಯಲ್ಲೇ ಈ ಪ್ರದೇಶಕ್ಕೆ ಸಾಗಬೇಕಾಗಿರುವುದರಿಂದ ತುಸು ಮುನ್ನೆಚ್ಚರಿಕೆ ಅಗತ್ಯ.
 
ದೇವ್ಕಾರ ಜಲಪಾತ
webdunia
ಕಾರವಾರ-ಯಲ್ಲಾಪುರ ತಾಲೂಕಿನ ಗಡಿ ಭಾಗದಲ್ಲಿ ಕಂಡುಬರುವ ಈ ಜಲಪಾತ ತುಂಬಾ ಮನಮೋಹಕವಾಗಿದೆ. ಸುಮಾರು 64 ಮೀಟರ್ ಎತ್ತರದಿಂದ ಆಳವಾದ ಕಣಿವೆಗೆ ಧುಮ್ಮಿಕ್ಕುವಾಗ ಹಾಲಿನಂತೆ ಕಂಡುಬರುತ್ತದೆ. ಕಾರವಾರದಲ್ಲಿ ಇದನ್ನು ‘ದೇವ್ಕಾರ’ ಎಂದು ಕರೆದರೆ, ಯಲ್ಲಾಪುರದಲ್ಲಿ ಇದನ್ನು ‘ಕಾನೂರು ವಜ್ರ’ ಎಂದೇ ಕರೆಯುತ್ತಾರೆ. ಕಾಳಿ ನದಿಗೆ ಕೊನೆಯ ಅಣೆಕಟ್ಟು ಕದ್ರಾ ಅಣೆಕಟ್ಟಾಗಿದ್ದು ಇದರ ಹಿನ್ನೀರಿನಿಂದ ಈ ಜಲಪಾತ ರಚನೆಯಾಗಿದೆ. ಈ ಜಲಪಾತವನ್ನು ವೀಕ್ಷಿಸುವಾಗ ಕರ್ನಾಟಕ ವಿದ್ಯುತ್ ಉತ್ಪಾದನಾ ಸಂಸ್ಥೆ (ಕೆ.ಪಿ.ಸಿ)ಯ ಅನುಮತಿಯನ್ನು ಪಡೆದು ಹಿನ್ನೀರಿನಲ್ಲಿ ಸಾಗಿ ಈ ಜಲಪಾತವನ್ನು ನೋಡಬಹುದು. ಅಥವಾ ಯಲ್ಲಾಪುರ ತಾಲೂಕಿನ ಕಳಚೆ ಹತ್ತಿರದ ಕಾನೂರು ಎಂಬ ಹಳ್ಳಿಯಿಂದ ಸ್ಥಳೀಯರ ಸಹಾಯವನ್ನು ಪಡೆದು ಚಾರಣಕ್ಕೆ ಸಹ ಹೋಗಬಹುದು. ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಈ ಜಲಪಾತ ವೀಕ್ಷಣೆಗೆ ಸೂಕ್ತವಾದ ಸಮಯವಾಗಿದೆ.
 
ಅಪ್ಸರಕೊಂಡ
webdunia
ಇದು ಹೊನ್ನಾವರದಿಂದ ಸುಮಾರು 7 ಕಿಮೀ ದೂರದಲ್ಲಿದೆ. ಇದರ ಪಕ್ಕದಲ್ಲೇ ಅರಬ್ಬೀ ಸಮುದ್ರ ತೀರವಿದ್ದು ಪ್ರವಾಸಿಗರನ್ನು ಮಂತ್ರ ಮುಗ್ಧವಾಗಿಸುತ್ತದೆ. ಇಲ್ಲಿ ಸುಮಾರು 50 ಅಡಿ ಎತ್ತರದಿಂದ ನೀರು ಧುಮುಕುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡುತ್ತಿದ್ದರೆಂಬುದು ಪ್ರತೀತಿ. ಆದ್ದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದೇ ಒಂದು ವಿಶೇಷ ಅನುಭವ ನೀಡುತ್ತದೆ. ಇಲ್ಲಿ ಈ ಜಲಪಾತದ ಪಕ್ಕದಲ್ಲೇ ಉಗ್ರನರಸಿಂಹ ದೇವಸ್ಥಾನವಿದ್ದು, ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಜಲಪಾತದಲ್ಲಿ ನೀರಿರುತ್ತದೆ. ಇದರ ಪಕ್ಕದಲ್ಲೇ ಇರುವಂತಹ ಉದ್ಯಾನ ವನಕ್ಕೆ ಭೇಟಿ ನೀಡಲು ಬೆಳಿಗ್ಗೆ ೮ ರಿಂದ ಸಂಜೆ ೪ರ ವರೆಗೆ ಅವಕಾಶವಿರುತ್ತದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ.
 
ಗಣೇಶ ಫಾಲ್ಸ್ 
webdunia

ಶಿರಸಿಯಿಂದ ಸುಮಾರು 39 ಕಿಮೀ ದೂರದಲ್ಲಿರುವ ಹುಲಿಕಲ್ಲು ಜಡಿಗದ್ದೆಯಿಂದ 10 ಕಿಮೀ ಸಾಗಿದರೆ ನಮಗೆ ಈ ಜಲಪಾತ ಕಂಡುಬರುತ್ತದೆ. ಇಲ್ಲಿ 74 ಅಡಿಗಳಿಂದ ನೀರು ಧುಮುಕುವುದನ್ನು ನೀವು ಕಾಣಬಹುದಾಗಿದೆ.
 
ಶಿರ್ಲೆ ಜಲಪಾತ
webdunia

ಯಲ್ಲಾಪುರದಿಂದ ಶಿರ್ಲೆಗೆ ಹೋಗಿ ಅಲ್ಲಿಂದ 2 ಕಿಮೀ ನಡೆದರೆ ನಮಗೆ ಸಿಗುವುದೇ ಈ ಶಿರ್ಲೆ ಜಲಪಾತ. ಇದು ಯಲ್ಲಾಪುರದಿಂದ ಸುಮಾರು 12 ಕಿಮೀ ದೂರದಲ್ಲಿದ್ದು 2 ಕಿಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದು ಸ್ವಲ್ಪ ಕಷ್ಟಕರ, ಆದರೆ ಚಾರಣ ಮಾಡಲು ಬಯಸುವವರಿಗೆ ಇದು ಉತ್ತಮ ಸ್ಥಳವೆಂದೇ ಹೇಳಬಹುದು.
 
ವಿಭೂತಿ ಜಲಪಾತ
webdunia

ಉತ್ತರ ಕನ್ನಡ ಜಿಲ್ಲೆಯ ವಿಶೇಷವಾದ ಜಲಪಾತಗಳಲ್ಲಿ ಇದು ಒಂದು. ಇದು ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿದ್ದು ಇದನ್ನು ಸರ್ವಋತು ಜಲಪಾತ ಎಂತಲೂ ಕರೆಯುತ್ತಾರೆ. ವರ್ಷಪೂರ್ತಿ ಹರಿಯುವ ಈ ಜಲಪಾತವು ನಿಸರ್ಗದ ನಿಗೂಡತೆಯನ್ನು ತನ್ನಲ್ಲಿ ಇರಿಸಿಕೊಂಡಿದೆ. ಇಲ್ಲಿ ಅಪರೂಪದ ಸಸ್ಯಗಳು ಮತ್ತು ವಿಶೇಷ ಜೀವ ವೈವಿಧ್ಯತೆಯನ್ನು ನಾವು ಕಾಣಬಹುದಾಗಿದೆ. ಇದು ದಟ್ಟವಾದ ಕಾಡಾಗಿದ್ದು, ಇಲ್ಲಿ ಕೇವಲ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ಔಷಧಿ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇದು ಯಾಣದಿಂದ ಸೂಮಾರು 10 ರಿಂದ 12 ಕಿಮೀ ದೂರದಲ್ಲಿದೆ.
 
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇನ್ನೂ ಹಲವಾರು ಚಿಕ್ಕ ಚಿಕ್ಕ ಜಲಪಾತಗಳಿದ್ದು ಮಳೆಗಾಲದಲ್ಲಿ ಮಾತ್ರ ಕೆಲವೊಂದು ಕಾಣಸಿಗುತ್ತವೆ. ಸಾಮಾನ್ಯವಾಗಿ ಈ ಎಲ್ಲಾ ಜಲಪಾತಗಳು ಕಾನನದೊಳಗಿರುವ ಕಾರಣ ಮಳೆಗಾಲದಲ್ಲಿ ಉಂಬಳದ ಕಾಟವಿರುತ್ತದೆ ಆದ ಕಾರಣ ತುಸು ಜಾಗರೂಕತೆಯಿಂದ ತೆರಳುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶಿಲ್ಪಾ ಶೆಟ್ಟಿಗೆ ಸಿಕ್ತು ಪ್ರಶಸ್ತಿಯ ಗರಿ