ಬೆಂಗಳೂರು: ಅಗ್ಗದ ದರದಲ್ಲಿ ಊಟ ಒದಗಿಸುವ ಉದ್ದೇಶದಿಂದ ನಗರದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ.
ಆದರೆ ಈ ಯೋಜನೆ ಯಶಸ್ವಿಯಾಗುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಕ್ಯಾಂಟೀನ್ ಅಡುಗೆಗೆ ಜಿರಲೆಯೋ ಮತ್ತೇನಾದರೂ ಹಾಕುವ ಭಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ಯೋಜನೆ ಯಶಸ್ವಿಯಾಗದಂತೆ ಮಾಡಲು ಬಿಜೆಪಿಯವರು ಏನು ಬೇಕಾದರೂ ಮಾಡಿಯಾರು. ಜಿರಲೆಯಂತಹದ್ದನ್ನು ಏನಾದರೂ ಹಾಕಿ ಊಟ ಕೆಡಿಸಲೂ ಹಿಂಜರಿಯರು ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ನಡುವೆ ಬಡವರಿಗಾಗಿ ತೆರೆದಿರುವ ಕ್ಯಾಂಟೀನ್ ನಲ್ಲಿ ಶ್ರೀಮಂತರೇ ಹೆಚ್ಚು ಫಲ ಪಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬಡವರಿಗಾಗಿ ಕ್ಯಾಂಟೀನ್ ತೆರೆಯಲಾಗಿದ್ದರೂ, ಶ್ರೀಮಂತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ನಿಜವಾದ ಫಲಾನುಭವಿಗಳಿಗೆ ಆಹಾರ ಸಿಗುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.