ಮೃತ ನಾಯಕರೊಬ್ಬರ ಸ್ಮರಣಾರ್ಥ ಅಲ್ಲಿನ ಯುವಕರು ಬರೋಬ್ಬರಿ 1000 ಯುನಿಟ್ ರಕ್ತ ದಾನ ಮಾಡುವ ಮೂಲಕ ಮೃತರ ಆತ್ಮಕ್ಕೆ ವಿನೂತನವಾಗಿ ಶಾಂತಿ ಕೋರಿದ್ದಾರೆ.
ಪುರಸಭಾ ಮಾಜಿ ಅಧ್ಯಕ್ಷರ ಅಕಾಲಿಕ ಮರಣದ ಹಿನ್ನೆಲೆ ಅವರ ಆತ್ಮಕ್ಕೆ ಶಾಂತಿಕೋರುವ ಸಲುವಾಗಿ ವಿವಿಧ ಸಂಘಟನೆಗಳು ಸೇರಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದವು. ಸುಮಾರು 1000 ಯೂನಿಟ್ ರಕ್ತ ಸಂಗ್ರಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಆನೇಕಲ್ ಪಟ್ಟಣದ ಪುರಸಭಾ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ಕೆಲವು ದಿನಗಳ ಹಿಂದೆ ಅಕಾಲಿಕ ಮರಣಕ್ಕೀಡಾಗಿದ್ದರು.
ಆನೇಕಲ್ ಪಟ್ಟಣಕ್ಕೆ ಕಾವೇರಿ ನೀರು ತರುವಲ್ಲಿ ಅಪಾರ ಶ್ರಮವಹಿಸಿದ್ದರು. ಅವರ ನೆನಪಿಗಾಗಿ ಆನೇಕಲ್ ತಾಲೂಕಿನಲ್ಲಿರುವ ಸಂಘಟನೆಗಳ ಸದಸ್ಯರು ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಈ ಶಿಬಿರದಲ್ಲಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಆನೇಕಲ್ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.
ದಾಖಲೆಯ 1000 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗಿದ್ದು, ಈ ರಕ್ತವನ್ನು ಅಶಕ್ತ ಬಡ ರೋಗಿಗಳಿಗೆ ನೀಡಲು ಅಶ್ವಥ್ ನಾರಾಯಣ ಅಭಿಮಾನಿಗಳು ನಿರ್ಧರಿಸಿದ್ದಾರೆ.