ಬೆಳಗಾವಿ : ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ಇಂದಿನಿಂದ 10 ದಿನಗಳ ಕಾಲ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಧಿವೇಶನ ಆರಂಭಕ್ಕೂ ಮುನ್ನವೇ ಬಿಜೆಪಿ ನೇತೃತ್ವದಲ್ಲಿ ರೈತ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸವುಂತೆ ಪ್ರತಿಭಟನೆ ನಡೆಸಲಿವೆ.
ಇಂದು ಮಧ್ಯಾಹ್ನ 12.15 ಕ್ಕೆ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ನೇತೃತ್ವದಲ್ಲಿ ರೈತರ ಬೃಹತ್ ಸಮಾವೇಶ ನಡೆಲಿದ್ದು, ಸಾಲಮನ್ನಾ, ಕಬ್ಬಿನ ಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಿದ್ದಾರೆ.
ಇನ್ನು ಅಧಿವೇಶನದ ವೇಳೆ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ನೀಡಲು ಸಮ್ಮಿಶ್ರ ಸರ್ಕಾರ ತಂತ್ರ ಮಾಡಿದೆ. ಹಾಗೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷ ಬಿಜೆಪಿ ಪ್ರತಿತಂತ್ರ ಹೂಡಿದ್ದು, ಸಾಲಮನ್ನಾ, ಕಬ್ಬಿನ ಬಾಕಿ ಪಾವತಿ ಸೇರಿ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲಿದೆ. ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಲಿದೆ.
ಒಟ್ಟಿನಲ್ಲಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದ್ದು, ಪ್ರತಿಪಕ್ಷದ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ ಕೂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.