ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ಗಣೇಶ ಹಬ್ಬದ ಪ್ರಸಾದ ತಯಾರಿಕೆಗೆ ಷರತ್ತು ವಿಧಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೆಂಡ ಕಾರಿದ್ದು, ಕೇವಲ ಗಣೇಶ ಹಬ್ಬಕ್ಕೆ ಮಾತ್ರ ಯಾಕೆ, ಮುಂದೆ ಇಫ್ತಾರ್ ಕೂಟಕ್ಕೂ ನಿಯಮ ಹೇರಬೇಕು ಎಂದಿದ್ದಾರೆ.
ಗಣೇಶೋತ್ಸವಗಳಲ್ಲಿ ಪ್ರಸಾದ ಸ್ವೀಕರಿಸಲು ಎಫ್ಎಸ್ಎಸ್ಎಐ ಪರವಾನಗಿ ಪಡೆದವರೇ ಆಗಬೇಕು ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿತ್ತು. ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಆಹಾರ ಇಲಾಖೆ ಹುಚ್ಚರ ರೀತಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಈ ನಿಯಮ ಸರಿಯಲ್ಲ. ಗಣೇಶ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಹೀಗೆ ಹುಚ್ಚರ ರೀತಿ ಆಹಾರ ಸುರಕ್ಷತೆ ನಿರ್ಧಾರ ಮಾಡುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರ ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ಈ ನಿರ್ಧಾರ ಮಾಡಿದೆ. ಹಿಂದೂಗಳ ಹಬ್ಬ ಬಂದಾಗ ಮಾತ್ರ ಇಂಥಾ ನಿಯಮಗಳು ನೆನಪಾಗುತ್ತವೆ. ಇಫ್ತಿಯಾರ್ ಕೂಟ ಇದ್ದಾಗ ಇಂಥ ಆದೇಶಗಳನ್ನು ಕೊಡಲಿ ನೋಢೋಣ ಎಂದು ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ.