ಬೆಂಗಳೂರು: ಈ ಬಾರಿ ಗಣೇಶ ಹಬ್ಬ ಆಚರಣೆಗೆ ನೂರೆಂಟು ಷರತ್ತು ವಿಧಿಸಿರುವ ರಾಜ್ಯ ಸರ್ಕಾರ ಈಗ ಪ್ರಸಾದ ವಿತರಣೆಗೂ ಮತ್ತೊಂದು ಕಡ್ಡಾಯ ನಿಯಮ ತರುವ ಮೂಲಕ ಮತ್ತೆ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಗಣೇಶ ಹಬ್ಬದ ಸಂದರ್ಭ ಪ್ರಸಾದ ತಯಾರಿಕೆಗೆ ಎಫ್ಎಸ್ಎಸ್ಎಐ ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾತ್ರ ತಯಾರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಇದಕ್ಕೆ ವಿಪಕ್ಷ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಸ್ಕ್ಯಾಮ್ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಪರಾಕಾಷ್ಠೆ ತಲುಪಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳಲ್ಲಿ ಎಫ್ಎಸ್ಎಸ್ಎಐ ಪರವಾನಗಿ ಪಡೆದಿರುವವರಿಂದ ಮಾತ್ರ ತಯಾರಿಸುವಂತೆ ಹೇಳಿ ಹಿಂದೂಗಳ ಭಾವನೆಗೆ ಮತ್ತೆ ಸರ್ಕಾರ ಧಕ್ಕೆ ತಂದಿದೆ. ಅನ್ಯಮತೀಯರ ಹಬ್ಬಗಳ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಆಹಾರ ತಯಾರಿಸುವಾಗ ಕೈ ಕಟ್ಟಿಕೊಂಡು ಕೂತಿದ್ದ ಸಿದ್ದರಾಮಯ್ಯನವರು, ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬದ ಆಚರಣೆಗೆ ಇಂಥಾ ವಿಘ್ನಾದೇಶಗಳನ್ನು ಹೊರಡಿಸುವ ಹಕೀಕತ್ತು ಏನಿದೆ? ಮುಖ್ಯಮಂತ್ರಿಗಳೇ ನಿಮ್ಮ ಓಲೈಕೆ ರಾಜಕಾರಣಕ್ಕೂ ಮಿತಿಯಿರಲಿ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಗಣೇಶನ ಮೂರ್ತಿ ಕೂರಿಸುವುದಕ್ಕೆ ಪರ್ಮಿಷನ್ ಬೇಕು, ಡಿಜೆ ಹಾಕುವಂತಿಲ್ಲ, ರಸ್ತೆ ಅಡ್ಡಗಟ್ಟುವಂತಿಲ್ಲ ಎಂದೆಲ್ಲಾ ನಿಯಮ ಮಾಡಿ ಸಾರ್ವಜನಿಕರು ಆಕ್ರೋಶಗೊಳ್ಳುವಂತೆ ಮಾಡಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಷರತ್ತು ಹಾಕಲಾಗಿದೆ.