ಶ್ರಾವಣ ಮಾಸ ಬಂತು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗೋದು ಬರುವ ಸಾಲು ಸಾಲು ಹಬ್ಬಗಳು. ಆಗಷ್ಟೇ ಸ್ವಲ್ಪ ಬಿಡುವು ಕೊಟ್ಟ ಮಳೆಯ ನಡುವೆಯೇ ಹಬ್ಬದ ಸಂಭ್ರಮ ಕಳೆಗಟ್ಟುವ ಸಂದರ್ಭ ಶ್ರಾವಣದ ಈ ತಿಂಗಳು. ಆದ್ರೆ ಕೆಲವರ ಪಾಲಿಗೆ ಶ್ರಾವಣ ಮಾಸ ಅಂದ್ರೆ ಒಂದಿಡೀ ತಿಂಗಳು ಮಾಂಸಾಹಾರ ಸೇವನೆ ಇಲ್ಲದ ತಿಂಗಳು ಎಂದೇ ಅರ್ಥ. ಈ ತಿಂಗಳು ಪೂರ್ತಿ ಸಸ್ಯಾಹಾರವನ್ನಷ್ಟೇ ಸೇವಿಸುವ ಅನೇಕರು ನಮ್ಮ ನಡುವೆಯೇ ಇದ್ದಾರೆ.
ಚಿಕ್ಕಂದಿನಿಂದಲೂ ಈ ಅಭ್ಯಾಸವನ್ನು ಇಡೀ ಕುಟುಂಬದ ಜೊತೆ ಪಾಲಿಸಿಕೊಂಡು ಬರುತ್ತಿರುತ್ತಾರೆ. ಮನೆಯಲ್ಲಿ ಎಲ್ಲರೂ ಈ ಆಚರಣೆ ಮಾಡ್ತಾರೆ, ತಾನೂ ಚಿಕ್ಕಂದಿನಿಂದ ಪಾಲಿಸುತ್ತೇನೆ ಎಂದೇ ಅನೇಕರು ಮುಂದುವರೆಸುತ್ತಾರೆ. ಆದ್ರೆ ನಿಜವಾಗ್ಲೂ ಶ್ರಾವಣ ಮಾಸದಲ್ಲಿ ಯಾಕೆ ಮಾಂಸಾಹಾರ ಸೇವನೆ ಮಾಡಬಾರದು? ಇದರ ಹಿಂದೆ ನಮ್ಮ ಪೂರ್ವಜರು ಮಾಡಿದ ಆಲೋಚನೆ ಏನು? ಈ ನಿಯಮ ಬಂದಿದ್ದು ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್…
ವಾರದಲ್ಲಿ ಕನಿಷ್ಟ ನಾಲ್ಕೈದು ದಿನಾದರೂ ನಾನ್ ವೆಜ್ ತಿಂದಿಲ್ಲ ಅಂದ್ರೆ ಆಗೋದೇ ಇಲ್ಲ ಎನ್ನುವ ಮಟ್ಟಿಗೆ ಇರುವವರೆಲ್ಲಾ ಶ್ರಾವಣ ಮಾಸ ಬಂತು ಎಂದರೆ ಗಪ್ ಚುಪ್ ಆಗಿಬಿಡ್ತಾರೆ. ಒಂದು ತಿಂಗಳ ಮಟ್ಟಿಗೆ ಇವರು ಲೈಫಲ್ಲಿ ನಾನ್ ವೆಜ್ ತಿಂದಿದ್ದೇ ಸುಳ್ಳು ಎನ್ನುವಷ್ಟರ ಮಟ್ಟಿಗೆ ಕಟ್ಟುನಿಟ್ಟಾಗಿ ವೃತ ಪಾಲಿಸುತ್ತಾರೆ. ಕೆಲವರು ತಂತಮ್ಮ ಮನೆದೇವರ ಹೆಸರಿನಲ್ಲಿ ವರ್ಷಕ್ಕೆ ಒಂದು ತಿಂಗಳು ಶ್ರಾವಣ ಮಾಸದಲ್ಲಿ ಈ ಸಂಪೂರ್ಣ ಸಸ್ಯಾಹಾರ ಮಾಡಿದರೆ, ಉಳಿದವರು ಹಬ್ಬಗಳಿರುವಾಗ ಹಾಗೆಲ್ಲ ನಡುನಡುವೆ ಮಾಂಸಾಹಾರ ಮಾಡಿದರೆ ಪೂಜೆಗಳಿಗೆ ಅಶುದ್ಧಿ ಉಂಟಾಗುತ್ತದೆ ಎಂದು ಭಾವಿಸಿ ಸಸ್ಯಾಹಾರ ಅನುಸರಿಸುತ್ತಾರೆ. ಆದ್ರೆ ಇದೆಲ್ಲಕ್ಕಿಂತ ಮಿಗಿಲಾದ ವೈಜ್ಞಾನಿಕ ಕಾರಣವನ್ನು ಕಂಡುಕೊಂಡಿದ್ದರು ನಮ್ಮ ಹಿರಿಯರು.
ಶ್ರಾವಣ ಮಾಸ ಎಂದರೆ ಇನ್ನೂ ಮಳೆಗಾಲ ಇದ್ದೇ ಇರುತ್ತದೆ. ಅಂದರೆ ಬಿಸಿಲಿನ ಅಭಾವ ಇರುತ್ತದೆ, ಹೆಚ್ಚು ಬೆಳಕಿರುವುದಿಲ್ಲ. ಹೀಗಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕೂಡಾ ಹೆಚ್ಚು ಚುರುಕಾಗಿ ಇರುವುದಿಲ್ಲ. ಇದರಿಂದಾಗಿ ಮಾಂಸಾಹಾರದಂಥಾ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ. ಆದ್ದರಿಂದ ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.
ಇನ್ನು ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುವ ಸಂಭವವಿದೆ. ಈ ನೀರಿನಲ್ಲೇ ವಾಸಿಸುವ ಮೀನುಗಳು ಅಥವಾ ಕಲುಷಿತ ನೀರಿನ ಮೇಲೆ ಅವಲಂಬಿತವಾಗಿರುವ ಅನೇಕ ಪ್ರಾಣಿಗಳಿಗೆ ಅರಿಯದೇ ನೀರಿನಿಂದ ಬರುವ ನಾನಾ ಖಾಯಿಲೆಗಳು ಬಂದಿರಬಹುದು. ಅದರಿಂದ ರಕ್ಷಣೆಗೆ ಸಸ್ಯಾಕಾರವೇ ಸೂಕ್ತ ಎಂದಿದ್ದಾರೆ ಹಿರಿಯರು.
ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭ ಕೂಡಾ. ಈ ಸಂದರ್ಭದಲ್ಲಿ ಮನುಷ್ಯರು ತಿನ್ನಲು ಮೀನು ಹಿಡಿದರೆ ಆಗ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿ ಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ, ಮmೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮೀನುಗಳನ್ನೂ ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.
ಒಟ್ಟಾರೆಯಾಗಿ ತಲತಲಾಂತರದಿಂದ ಮುಂದುವರೆದಿರುವ ಈ ಆಚರಣೆ ಮನುಷ್ಯನ ದೇಹ ಮತ್ತು ಆರೋಗ್ಯಕ್ಕೂ, ಪ್ರಾಣಿಗಳು ಮತ್ತು ಪ್ರಕೃತಿಯ ಒಳಿತಿಗೂ ಉತ್ತಮವಾದ ದೃಷ್ಟಿಯನ್ನು ಇಟ್ಟುಕೊಂಡೇ ಮಾಡಲಾಗಿದೆ. ಅಲ್ಲದೇ ಅನೇಕ ಹಬ್ಬ ಹರಿದಿನಗಳು ಕೂಡಾ ಶ್ರಾವಣ ಮಾಸದಲ್ಲಿ ಇರುವುದರಿಂದ ಟಿಡುನಡುವೆ ಉಪವಾಸ, ಫಲಾಹಾರಗಳನ್ನೂ ಅನೇಕರು ಮಾಡುತ್ತಾರೆ. ಇದು ಕೂಡಾ ಆರೋಗ್ಯಕ್ಕೆ ಪೂರಕವಾದ ಅಭ್ಯಾಸಗಳೇ ಆಗಿವೆ. ಒಂದೆಡೆ ಲಘುವಾದ ಆಹಾರ ಸೇವನೆ, ಮತ್ತೊಂದೆಡೆ ಜೀರ್ಣಾಂಗಗಳಿಗೆ ಅನುಕೂಲಕರ ಅಭ್ಯಾಸಗಳು.. ಎಲ್ಲವೂ ಸೇರಿ ಒಟ್ಟಾರೆ ನಿಸರ್ಗ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನದಲ್ಲೇ ನಮ್ಮ ಹಿರಿಯರು ಈ ಆಚರಣೆ ಆರಂಭಿದ್ದರು ಎನಿಸುತ್ತದೆ