ಬೆಂಗಳೂರು (ಆ. 11): ತಾವು ಬಯಸಿದ ಖಾತೆ ಸಿಗದ ಹಿನ್ನಲೆ ರಾಜೀನಾಮೆ ನಿರ್ಧಾರ ಕೈ ಗೊಂಡಿರುವ ಸಚಿವ ಆನಂದ್ ಸಿಂಗ್ ಅವರ ಓಲೈಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಇದೇ ಕಾರಣದಿಂದ ಅವರಿಗೆ ಇಂದು ಚರ್ಚೆಗೆ ಆಹ್ವಾನ ನೀಡಿದ್ದು, ಈ ವೇಳೆ ಮುನಿಸು ಶಮನ ಮಾಡುವ ಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.
ತಮ್ಮಗೆ ನಿರೀಕ್ಷಿಸದಂತೆ ದೊಡ್ಡ ಖಾತೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಆನಂದ್ ಸಿಂಗ್ ಖಾತೆ ಹಂಚಿಕೆಯಾದ ಮರುಕ್ಷಣವೇ ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದರು. ಅಲ್ಲದೇ ಈ ಕುರಿತು ತಮ್ಮ ಆಪ್ತರೊಂದಿಗೆ ಮಾತನಾಡಿರುವ ಅವರು ತಮ್ಮ ಸಚಿವ ಸ್ಥಾನಕ್ಕೆ ಮಾತ್ರವಲ್ಲದೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆನಂದ್ ಸಿಂಗ್ ಈ ನಿರ್ಧಾರ ತೆಗೆದುಕೊಂಡರೆ ಅದು ಸರ್ಕಾರಕ್ಕೆ ಮುಳವಾಗಲಿದೆ ಎಂದ ಅರಿತ ಸಿಎಂ ಅವರ ಓಲೈಕೆಗೆ ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಇಂದು ಆನಂದ್ ಸಿಂಗ್ ಅವರಿಗೆ ಆಹ್ವಾನ ನೀಡಿದ್ದು, ಮಾತುಕತೆಗೆ ಕರೆದಿದ್ದಾರೆ.
ಈ ಎಲ್ಲಾ ಬೆಳವಣಿಗೆ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಯಾವುದೊ ಇಂದು ಭಾವನಾತ್ಮಕ ಸಂದರ್ಭದಲ್ಲಿ ಈ ವಿಷಯ ಅವರು ಹೇಳಿದ್ದಾರೆ. ಈ ಕುರಿತು ಶಾಂತಿಯುತವಾಗಿ ಕುಳಿತು ಮಾತನಾಡಬೇಕು.ಆ ನಂತರ ಎಲ್ಲವೂ ಕೂಡ ಸರಿಯಾಗಲಿದೆ ಕೇವಲ ನಾನೊಬ್ಬನೇ ಅಲ್ಲ, ಪಕ್ಷದಲ್ಲಿ ಎಲ್ಲರು ಇದ್ದಾರೆ. ನಮ್ಮದು ಒಂದು ರಾಷ್ಟ್ರೀಯ ಪಕ್ಷ. ಹೀಗಾಗಿ ಎಲ್ಲರ ಜೊತೆ ಚರ್ಚಿಸುತ್ತೇನೆ ಎಂದರು.
ಆನಂದ್ ಸಿಂಗ್ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಆನಂದ್ ಸಿಂಗ್ ಇಂದು ಸಂಜೆ ಬರಬಹುದು. ಅವರು ಬಂದ ಮೇಲೆ ಅವರ ಜೊತೆ ಚರ್ಚೆ ಮಾಡುತ್ತೇನೆ. ಅಂತಿಮವಾಗಿ ಆ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಈ ಬಗ್ಗೆ ಹೈಕಮಾಂಡ್ ನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ತರಾತುರಿಯಲ್ಲಿ ಆನಂದ್ ಸಿಂಗ್ಗೆ ಆಹ್ವಾನ ನೀಡಿರುವ ಕುರಿತು ಮಾತನಾಡಿದ ಅವರು, ನಾನು ನಾಳೆ ಇರುವುದಿಲ್ಲ. ಮಂಗಳೂರು, ಉಡುಪಿ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಇಂದೇ ಆನಂದ್ ಸಿಂಗ್ ಅವರು ಬರಲಿ ಮಾತನಾಡೋಣ ಎಂದು ತಿಳಿಸಿದರು.
ಆನಂದ್ ಸಿಂಗ್ ಮಾತ್ರವಲ್ಲದೇ ಎಂಟಿಬಿ ನಾಗರಾಜ್ ಮತ್ತು ಶ್ರೀ ರಾಮುಲು ಕೂಡ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್ ಕೂಡ ಟ್ವೀಟ್ ಮೂಲಕ ಸಿಎಂಗೆ ಎರಡ್ಮೂರು ದಿನಗಳ ಗಡುವು ವಿಧಿಸಿದ್ದಾರೆ. ಈ ಹಿನ್ನಲೆ ಎಲ್ಲರೂ ರಾಜೀನಾಮೆ ಹಾದಿ ಹಿಡಿದರೆ ಸರ್ಕಾರಕ್ಕೆ ಸಂಕಷ್ಟ ಒದಗಲಿದೆ. ಈ ಹಿನ್ನಲ್ಲೆ ಸಿಎಂ ಮರು ಖಾತೆ ಹಂಚಿಕೆಗೆ ಮುಂದಾಗಲಿದ್ದಾರೆ.
ನೀರಾವರಿ ಇಲ್ಲವೇ ಇಂಧನ ಇಲಾಖೆ ಕೇಳಿದ್ದ ಆನಂದ್ ಸಿಂಗ್ಗೆ ಸದ್ಯ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಆನಂದ್ ಸಿಂಗ್ ಬಯಸಿದ ಖಾತೆ ನೀಡದಿದ್ದರೂ ಅದಕ್ಕೆ ತಕ್ಕಂತಹ ಖಾತೆ ನೀಡಿ ಅವರ ಮುನಿಸು ಶಮನ ಮಾಡಬಹುದು ಎನ್ನಲಾಗಿದೆ.