ಧಾರವಾಡ : ಕರ್ನಾಟಕಕ್ಕೆ ಮಹಿಳಾ ಸಿಎಂ ಆಗೋದು ಯಾವಾಗ? ಎಂದು ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಟಿ.ಎಸ್ ನಾಗಾಭರಣ ಪ್ರಶ್ನೆ ಹಾಕಿದ್ದಾರೆ.
ಕನ್ನಡ ನಾಡು ನುಡಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಮ್ಮ ಕರ್ನಾಟಕ ರಾಜ್ಯವಾಗಿ ಎಷ್ಟು ವರ್ಷ ಆಯ್ತು? ಒಬ್ಬ ಮಹಿಳೆಯಾದರು ಇಲ್ಲಿಯವರೆಗೆ ಸಿಎಂ ಆಗಿದ್ದಾರೆಯೇ? ಬೇರೆ ರಾಜ್ಯಗಳ ಕಡೆ ಖಂಡಿತ ಆಗಿದ್ದಾರೆ ಇಲ್ಲ ಅಂತಿಲ್ಲ. ಒಬ್ಬರಾದರೂ ನಮ್ಮ ರಾಜ್ಯದಲ್ಲಿ ಆಗಿಬೇಕಿತ್ತಲ್ಲವಾ? ಮಹಿಳಾ ಪ್ರಾತಿನಿಧ್ಯ ರಾಜಕೀಯದಲ್ಲಿ ಎಷ್ಟಾಗಿದೆ ಎಂದು ಕಿಡಿಕಾರಿದರು.
ಸಾಹಿತ್ಯ, ಸಾಂಸ್ಕೃತಿಕ, ಆಡಳಿತದಲ್ಲಿ ಮಹಿಳೆಯ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ಮಹಿಳೆಯರು ರಾಜಕಾರಣದಲ್ಲಿ ಬೆಳೆದಾಗ ಮಾತ್ರ ಒಂದು ಶಕ್ತಿ ಆಗಲು ಸಾಧ್ಯ. ಪ್ರಜಾಪ್ರಭುತ್ವದ ಪರಿಧಿಯಲ್ಲಿ ಮಹಿಳಾ ಶಕ್ತಿ ಹುಟ್ಟು ಹಾಕಬೇಕಿದೆ. ಇಂದಿರಾಗಾಂಧಿ, ಮಮತಾ ಬ್ಯಾನರ್ಜಿಯಂತೆ ಕರ್ನಾಟಕದಲ್ಲಿಯೂ ಒಬ್ಬ ಮಹಿಳೆ ಸಿಎಂ ಆಗಬೇಕು ಎಂದರು.
ಪ್ರಸ್ತುತ ನಟರ ನಡತೆ ಬಗ್ಗೆ ನಿರ್ದೇಶಕ ನಾಗಾಭರಣ ಬೇಸರ ವ್ಯಕ್ತಪಡಿಸಿದ್ದು, ನೀವು ಸಿನಿಮಾ ನಟರ ಸಂದರ್ಶನ ನೋಡಿರಬಹುದು. ಟಿವಿ ಮೈಕ್ ಮೀಡಿಯಾ ಮುಂದೆ ಕುಳಿತುಕೊಳ್ಳುವ ಭಂಗಿ ನೋಡಬೇಕು. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.