ಬೆಂಗಳೂರು: ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಒಡಿಶಾದ ತನ್ನ ಸ್ವಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಖಚಿತವಾಗಿದೆ. ಆದರೆ ಈ ಕೇಸ್ ಇಲ್ಲಿಗೇ ಕ್ಲೋಸ್ ಆಗುತ್ತಾ? ಇಲ್ಲಿದೆ ವಿವರ.
ನೇಪಾಳಿ ಮೂಲದ ಮಹಿಳೆ ಮಹಾಲಕ್ಷ್ಮಿಯನ್ನು ವಯ್ಯಾಲಿಕಾವಲ್ ನ ಆಕೆಯ ಮನೆಯಲ್ಲಿಯೇ ರಂಜನ್ ಕೊಲೆ ಮಾಡಿ ಮೃತದೇಹವನ್ನು ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ತುಂಬಿ ಪರಾರಿಯಾಗಿದ್ದ. ಸೆಪ್ಟೆಂಬರ್ 3 ರಂದು ಹತ್ಯೆ ಮಾಡಿದ್ದ ಆರೋಪಿ ಅಂದೇ ತನ್ನ ಊರಿಗೆ ಪರಾರಿಯಾಗಿದ್ದ.
ಇದೀಗ ಪ್ರಕರಣ ಬೆಳಕಿಗೆ ಬಂದ ಮೇಲೆ ಪೊಲೀಸರ ತಂಡ ಒಡಿಶಾಗೆ ಹುಡುಕಾಟ ನಡೆಸಲು ಹೋಗಿದೆ. ಈ ನಡುವೆ ತನ್ನ ಮನೆಯವರೊಂದಿಗೆ ರಾತ್ರಿ ಊಟ ಮಾಡಿದ್ದ ಆರೋಪಿ ಮನೆಯ ಬಳಿಯಿರುವ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದ. ಡೆತ್ ನೋಟ್ ನಲ್ಲಿ ತಾನೇ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಅಷ್ಟಕ್ಕೇ ಈ ಪ್ರಕರಣ ಕ್ಲೋಸ್ ಆಗಲ್ಲ.
ಪೊಲೀಸರಿಗೆ ಈಗಲೇ ನಿಜವಾದ ಸಮಸ್ಯೆ ಬಂದಿರುವುದು. ಆರೋಪಿ ಬದುಕಿದ್ದರೆ ಆತನ ಬಳಿಯಿಂದಲೇ ಸತ್ಯ ಬಾಯಿ ಬಿಡಿಸಬಹುದಿತ್ತು. ಆದರೆ ಈಗ ಆತನೂ ತೀರಿಕೊಂಡಿರುವುದರಿಂದ ಸಾಬೀತುಪಡಿಸುವುದೇ ಕಷ್ಟವಾಗಿದೆ. ಅದಲ್ಲದೆ, ಕೊಲೆಯಲ್ಲಿ ಇನ್ನೂ ಬೇರೆಯವರಿದ್ದರಾ ಎಂಬುದನ್ನೂ ಕಂಡುಹಿಡಿಯಬೇಕಿದೆ. ಹೀಗಾಗಿ ಆರೋಪಿ ಸಾವನ್ನಪ್ಪಿರುವುದರಿಂದ ಪೊಲೀಸರಿಗೆ ಹೊಸ ತಲೆನೋವುಗಳು ಶುರುವಾಗಿದೆ.