ಬೆಂಗಳೂರು: ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ನಿರ್ಧಾರ ಸರಿಯೋ ತಪ್ಪೋ ಎಂದು ಇಂದು ಹೈಕೋರ್ಟ್ ನಲ್ಲಿ ತೀರ್ಮಾನವಾಗಲಿದೆ. ಆದರೆ ಈ ತೀರ್ಪು ಸಿದ್ದರಾಮಯ್ಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಇಲ್ಲಿದೆ ವಿಶ್ಲೇಷಣೆ.
ಸಿದ್ದರಾಮಯ್ಯ ಪರವಾಗಿ ತೀರ್ಪು ಬಂದರೆ ಏನಾಗಬಹುದು?
ಮುಡಾ ಸೈಟು ಅಕ್ರಮವಾಗಿ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಮೇಲೆ ಸಾಮಾಜಿಕ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದ್ದರು. ದೂರು ಪರಿಶೀಲಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಆದರೆ ಇದನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಿಚಾರಣೆ ಪೂರ್ಣವಾಗಿ ಇಂದು ತೀರ್ಪು ಹೊರಬೀಳಲಿದೆ.
ಒಂದು ವೇಳೆ ತೀರ್ಪು ಸಿದ್ದರಾಮಯ್ಯ ಪರವಾಗಿ ಬಂದರೆ ಅದು ಕಾಂಗ್ರೆಸ್ ಗೆ ದೊಡ್ಡ ಬೂಸ್ಟ್ ಆಗಲಿದೆ. ಬಿಜೆಪಿ ಸೇರಿದಂತೆ ತಮ್ಮನ್ನು ಟೀಕಿಸುತ್ತಿದ್ದವರಿಗೆ ಸಿದ್ದರಾಮಯ್ಯ ತಕ್ಕ ತಿರುಗೇಟು ನೀಡಲಿದ್ದಾರೆ. ಅಲ್ಲದೆ, ರಾಜ್ಯಪಾಲರ ವಿರುದ್ಧ ಹೋರಾಟಕ್ಕಿಳಿಯಲಿದೆ. ಅಲ್ಲದೆ, ಸಿಎಂ ಕುರ್ಚಿಯೂ ಭದ್ರವಾಗಲಿದೆ.
ರಾಜ್ಯಪಾಲರ ಪರ ತೀರ್ಪು ಬಂದರೆ?
ಒಂದು ವೇಳೆ ರಾಜ್ಯಪಾಲರ ಪರವಾಗಿ ತೀರ್ಪು ಬಂದರೆ ಸಿಎಂ ವಿರುದ್ಧ ವಿಚಾರಣೆ ಅನುಮತಿ ಸಿಗಲಿದೆ. ಅವರ ವಿರುದ್ಧ ಎಫ್ಐಆರ್ ದಾಖಲಾಗಲಿದೆ. ಹಾಗಿರುವಾಗ ಸಿಎಂ ಕುರ್ಚಿಗೆ ಕಂಟಕವಾಗಬಹುದು. ವಿಪಕ್ಷಗಳು ಮತ್ತು ಸ್ವಪಕ್ಷೀಯರಿಂದಲೇ ಸಿಎಂ ರಾಜೀನಾಮೆಗೆ ಒತ್ತಡ ಬರಬಹುದು. ಹೀಗಿರುವಾಗ ಸರ್ಕಾರದ ಮೇಲೆ ಇದು ಪರಿಣಾಮ ಬೀರಲಿದೆ. ಹೀಗಾಗಿ ಇಂದು ಹೈಕೋರ್ಟ್ ನೀಡುವ ತೀರ್ಪು ಮಹತ್ವದ್ದಾಗಿದೆ.