ಬೆಂಗಳೂರು: ಯಾರು ಏನು ಹೇಳಿದ್ರೂ ಕೇರ್ ಮಾಡಲ್ಲ, ಈ ಬಾರಿ ನೀರಿನ ದರ ಹೆಚ್ಚಳ ಮಾಡಿಯೇ ತೀರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಅದರಂತೆ ಈಗ ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಶಾಕ್ ಸಿಕ್ಕಿದೆ.
ಬೆಂಗಳೂರಿಗರಿಗೆ ಕಾವೇರಿ ನೀರಿನ ಬರ ನೀಗಿಸಲು ಐದನೇ ಹಂತದ ಕಾವೇರಿ ನೀರು ಪೂರೈಕೆಗೆ ಸಿದ್ಧತೆ ಮಾಡಲಾಗಿದೆ. ಇದೇ ವಿಜಯದಶಮಿ ವೇಳೆಗೆ ನೀರಿನ ಸೌಲಭ್ಯ ಒದಗಿಸಲು ಇಂದು ಡಿಕೆ ಶಿವಕುಮಾರ್ ಸಭೆ ನಡೆಸಿದರು. ಈ ಖುಷಿಯ ನಡುವೆ ನೀರಿನ ದರ ಏರಿಕೆ ಮಾಡುತ್ತಿರುವುದಾಗಿ ಡಿಕೆಶಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಕಾವೇರಿ 5 ನೇ ಹಂತದಲ್ಲಿ ನಿರ್ಮಿಸಲಾದ ಜಲರೇಚಕ ಯಂತ್ರಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಡಿಕೆ ಶಿವಕುಮಾರ್ ನೀರಿನ ದರ ಏರಿಕೆ ಮಾಡುವ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ. ಹಾಲಿನ ದರವನ್ನೂ ಒಮ್ಮೆ ಏರಿಕೆ ಮಾಡಲಾಗಿದ್ದು, ಮತ್ತೊಮ್ಮೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರೇ ಘೋಷಿಸಿದ್ದಾರೆ. ಇದೀಗ ಡಿಸಿಎಂ ಡಿಕೆಶಿ ನೀರಿನ ದರ ಏರಿಕೆ ಬರೆ ಹಾಕುತ್ತಿದ್ದಾರೆ. ಹೀಗಾದರೆ ಜನ ಸಾಮಾನ್ಯರ ಬದುಕು ದುಸ್ತರವಾಗಲಿದೆ.