ಕೊರೊನಾ ಪಾಸಿಟಿವ್ ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಂಟು ಜನರ ಕೋವಿಡ್ – 19 ಪರೀಕ್ಷಾ ವರದಿ ಬಂದಿದೆ.
ಮಂಡ್ಯದ ನಾಗಮಂಗಲ ತಾಲೂಕಿನ ಡಿ. ಸಾತೇನಹಳ್ಳಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 8 ಜನರ ವರದಿ ನೆಗೆಟಿವ್ ಬಂದಿದ್ದು, ಹಾಸನ ಜಿಲ್ಲಾಡಳಿತ ಹಾಗೂ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹಸಿರು ವಲಯದ ಜಿಲ್ಲೆ ಹಾಸನಕ್ಕೂ ಕೊರೊನಾ ಸೋಂಕು ಆವರಿಸೋ ಆತಂಕ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 22 ಗಂಟೆ ಸೋಂಕಿತನ ಜೊತೆಯಲ್ಲಿ ಇದ್ದವರನ್ನು ಪರೀಕ್ಷೆಗೊಳಪಡಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಎಂಟು ನೇರ ಸಂಪರ್ಕ, 30 ಸೆಕೆಂಡರಿ ಕಾಂಟಾಕ್ಟ್ ಜನರ ಸ್ವ್ಯಾಬ್ ಪರೀಕ್ಷೆಗೊಳಪಡಿಸಲಾಗಿತ್ತು. 8 ಪ್ರಾಥಮಿಕ ಸಂಪರ್ಕಿತರು ಸೇರಿ ಎಲ್ಲಾ 38 ಜನರ ವರದಿ ನೆಗೆಟಿವ್ ಬಂದಿದೆ. ತೀವ್ರ ಆತಂಕ ಸೃಷ್ಟಿಸಿದ್ದ ನಾಗಮಂಗಲದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕೇಳಿ ವೈದ್ಯಕೀಯ ವರದಿಯಿಂದ ಅಧಿಕಾರಿಗಳು ಕೊಂಚ ನಿರಾಳವಾಗಿದ್ದಾರೆ.
ವರದಿ ನೆಗೆಟಿವ್ ಬಂದರೂ ಎಲ್ಲರನ್ನೂ ಆಸ್ಪತ್ರೆಯಲ್ಲಿ ಕ್ವಾರಂಟೇನ್ ಮಾಡಿರುವ ಜಿಲ್ಲಾಡಳಿತ, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.