ಬಿಜೆಪಿಯ ಸಚಿವರು, ಶಾಸಕರು ರ್ಯಾಲಿ, ಸಾರ್ವಜನಿಕ ಸಮಾರಂಭ ಮಾಡಿದರೆ ಯಾವುದೇ ಕೇಸು ಹಾಕುವುದಿಲ್ಲ. ಜನರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ತಡೆಯಲು 30 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.
ಗೊಡ್ಡು ಬೆದರಿಕೆಗೆಲ್ಲಾ ನಾವು ಜಗ್ಗುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕನಕಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸುಳ್ಳು ಜಾಹಿರಾತು ನೀಡಿ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ಮೇಕೆದಾಟು ಯೋಜನೆಗಾಗಿ ಬೇರೇನನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದೆ, ನಿನ್ನೆ ಪಾದಯಾತ್ರೆಯಲ್ಲಿ ಭಾಗವಹಿಸಲಿಲ್ಲ. ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಂಡು, ನಿನ್ನೆ ಇಡಿ ದಿನ ವಿಶ್ರಾಂತಿ ಪಡೆದೆ ಈಗ ಜ್ವರ ಬಿಟ್ಟಿದೆ. ಇಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.
ಎರಡು ದಿನಗಳ ಕಾಲ ಯಶಸ್ವಿ ಪಾದಯಾತ್ರೆ ನಡೆದಿದೆ.
ಡಿ.ಕೆ.ಶಿವಕುಮಾರ್ ಜೊತೆ ಅನೇಕ ಮುಖಂಡರು, ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದಾರೆ. ನಿನ್ನೆ ಚಾಮರಾಜನಗರ ಜಿಲ್ಲಾಯಿಂದ ನಮ್ಮ ಕಾರ್ಯಕರ್ತರು ಭಾಗವಹಿಸಿದ್ದರು. ಇಂದು ಮೈಸೂರು ಜಿಲ್ಲಾಯ 11 ವಿಧಾನಸಭಾ ಕ್ಷೇತ್ರ ಕಾರ್ಯಕರ್ತರು ಭಾಗವಹಿಸಿದ್ದಾರೆ. ನಾಳೆ ಹಾಸನ, ತುಮಕೂರು ಕೋಲಾರ ಸೇರಿದಂತೆ ಹಲವು ಜಿಲ್ಲಾಗಳ ಕಾರ್ಯಕರ್ತರು ಭಾಗಿಯಾಗಲಿದ್ದ್ದಾರೆ.