Publish Date: Sun, 27 Jan 2019 (15:35 IST)
Updated Date: Sun, 27 Jan 2019 (15:39 IST)
ಸಂಡಾಸು ಹೊಂಡಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ.
ಕೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೋಟ ನಿವಾಸಿಗಳಾದ ಭರತ್ ಮತ್ತು ಯತೀಶ್ ಹತ್ಯೆಗೊಳಗಾದವರಾಗಿದ್ದಾರೆ. ಮೃತ ಯತೀಶ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು.
ಭರತ್ ಕೋಟದಲ್ಲಿ ಆಟೋ ಚಾಲಕನಾಗಿದ್ದರು. ಅವರ ಸ್ನೇಹಿತ ಲೋಹಿತ್ ಮನೆಯಲ್ಲಿನ ಸಂಡಾಸು ಹೊಂಡದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಭರತ್ ಮತ್ತು ಯತೀಶ್ ಸಹಕಾರ ಮಾಡಿದ್ದೇ ಕೊಲೆಗೆ ಪ್ರೇರಣೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರೌಡಿಶೀಟರ್ ಹರೀಶ್ ರೆಡ್ಡಿ ಸಹಚರರು ಕೋಟದ ರಾಜಲಕ್ಷ್ಮಿ ಸಭಾಂಗಣದ ಮುಂದೆ ನಿನ್ನೆ ರಾತ್ರಿ 10.30 ಸುಮಾರಿಗೆ ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ರಕ್ತದ ಮಡುವಿನಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.