ಬೆಂಗಳೂರು : ಮಂಗಳವಾರ ಹಾಗೂ ಬುಧವಾರ ದೇಶಾದ್ಯಂತ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿವೆ. ದೇಶಾದ್ಯಂತ ಮಂಗಳವಾರ ಹಾಗೂ ಬುಧವಾರ ನಡೆಯುವ ಈ ಮುಷ್ಕರದಲ್ಲಿ ರಾಜ್ಯದ ಹಲವು ಕಾರ್ಮಿಕ ಸಂಘಟನೆಗಳು, ಎಲ್ಲಾ ಕಾರ್ಮಿಕರು ಭಾಗಿಯಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಇನ್ನೂ ಸರ್ಕಾರಿ ಶಾಲೆಗಳಿಗೆ ಭಾರತ್ ಮುಷ್ಕರ ಹಿನ್ನೆಲೆ ರಜೆ ಘೋಷಣೆ ಮಾಡಿಲ್ಲ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್, ‘ಮುಷ್ಕರಕ್ಕೆ ಖಾಸಗಿ ಶಾಲೆಗಳು ಬೆಂಬಲ ಕೊಡುತ್ತಿದ್ದೇವೆ ಅಂತ ಅಂದುಕೊಳ್ಳಬೇಡಿ. ನಾವು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಘೋಷಿಸಲು ತಿರ್ಮಾನಿಸಿದ್ದೇವೆ. ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಸದಸ್ಯರು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾಳೆ, ನಾಡಿದ್ದು ಎರಡು ದಿನಗಳು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.