ಬೆಂಗಳೂರು : ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಗೆ ಕರೆಕೊಟ್ಟಿದೆ.
ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಬಂದ್ ಗೆ ಕರೆ ಕೊಟ್ಟಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯವರೆಗೂ ಬಂದ್ ನಡೆಯಲಿದೆ ಎಂದು ತಿಳಿದುಬಂದಿದೆ
ಅಂದು ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಗಳು ಸ್ತಬ್ಧವಾಗಲಿದೆ ಅಂತ ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ. ಹಾಗೇ ಆಟೋ ಓಲಾ ಮತ್ತು ಊಬರ್ ಕ್ಯಾಬ್‍ಗಳು ಸಿಗುವುದಿಲ್ಲ. ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳಲಿರುವುದರಿಂದ ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳು ಇವೆ. ಎಪಿಎಂಸಿ ಲಾರಿ ಸಿಬ್ಬಂದಿ ಪಾಲ್ಗೊಳ್ಳುವುದರಿಂದ ಎಪಿಎಂಸಿ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ. ಇನ್ನೂ ಶಾಲಾ ಕಾಲೇಜುಗಳ ವಾಹನಗಳು ಸ್ತಬ್ಧವಾಗುವುದರಿಂದ ಆಯಾಯ ಜಿಲ್ಲಾಧಿಕಾರಿಗಳು ಶಾಲಾ -ಕಾಲೇಜು ಬಂದ್ ನಿರ್ಣಯ ಕೈಗೊಳ್ಳಲಿದ್ದಾರೆ.
ಆದರೆ ಆಸ್ಪತ್ರೆಗಳು, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟುಗಳು ಇರುತ್ತದೆ. ಜೊತೆಗೆ ಅಂಬುಲೆನ್ಸ್ ಸೇವೆ, ಮೆಟ್ರೋ ಮತ್ತು ರೈಲು ಸೇವೆ ಇರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.