ತುಮಕೂರು: ಕಳೆದ ನಾಲ್ಕು ದಿನಗಳಿಂದ ಕಲುಷಿತ ನೀರು ಸೇವಿಸಿ ಆರು ಮಂದಿ ಸಾವನ್ನಪ್ಪಿ ನೂರಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಚಿಕ್ಕದಾಸಪ್ಪ (76), ಪೆದ್ದಣ್ಣ (74) ಎಂಬ ಇಬ್ಬರು ವಯೋವೃದ್ಧರು ಇಲ್ಲಿನ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಐಸಿಯುಗಳಲ್ಲಿ ಮೂವರು ವೃದ್ಧರು, ಮೂವರು ಮಕ್ಕಳು ಸೇರಿದಂತೆ ಹತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತು ಜಿಲ್ಲಾ ಸರ್ಜನ್ ಡಾ.ಅಸ್ಗರ್ ಬೇಗ್ ಸಚಿವರ ಜೊತೆಗಿದ್ದರು. ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮಕೈಗೊಳ್ಳಲು ಸಚಿವರು ಡಿಸಿಗೆ ಸೂಚಿಸಿದರು.
ಈ ಸಂಬಂಧ ಶಾಸಕ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಾಲೂಕಿನಾದ್ಯಂತ ಹಲವಾರು ವರ್ಷಗಳಿಂದ ಸ್ವಚ್ಛತೆ ಕಾಣದ ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಚಿನ್ನೇನಹಳ್ಳಿ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.