ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್‌ನನ್ನು ಹಾಡಿಹೊಗಳಿದ್ದಾರೆ.
ಟಿಪ್ಪು ಜಯಂತಿ ಆಚರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಜಯಂತಿ ವಿರೋಧಿಸುತ್ತಿರುವ ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಸಮರ ಮುಂದುವರೆದಿದೆ. ಈ ಮಧ್ಯೆ ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಕೋವಿಂದ, ಟಿಪ್ಪು ಓರ್ವ ಸ್ವಾತಂತ್ರ್ಯ ಸೇನಾನಿ, ಬ್ರಿಟಿಷರ ವಿರುದ್ಧ ಹೋರಾಡಿದ್ದ ಅಪ್ರತಿಮ ದೇಶಪ್ರೇಮಿ ಎಂದು ಬಣ್ಣಿಸಿದ್ದಾರೆ.
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪ್ರಪ್ರಥಮವಾಗಿ ರಾಕೆಟ್ ತಂತ್ರಜ್ಞಾನ ಬಳಸಿದ್ದು ಟಿಪ್ಪು ಸುಲ್ತಾನ್. ಸ್ವಾತಂತ್ರ್ಯ ಸೇನಾನಿಯಾಗಿದ್ದ ಟಿಪ್ಪು ಸುಲ್ತಾನ್ ರಾಕೆಟ್ ತಂತ್ರಜ್ಞಾನದ ಜನಕನಾಗಿದ್ದ. ಬಳಿಕವಷ್ಟೇ ಆ ತಂತ್ರಜ್ಞಾನಗಳನ್ನು ಯೂರೋಪ್ ದೇಶಗಳು ಅಳವಡಿಸಿಕೊಂಡಿದ್ದವು ಎಂದರು. ಇದೇ ವೇಳೆ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆಯನ್ನು ಸ್ಮರಿಸಿದರು.
ಟಿಪ್ಪು ಜಯಂತಿ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾಗಿರುವಾಗಲೇ ಈ ವಿದ್ಯಾಮಾನ ನಡೆದದ್ದು, ಬಿಜೆಪಿ ನಾಯಕರಿಗೆ ತೀವ್ರ ಇರಿಸು-ಮುರಿಸು ತಂದಿದೆ. ಟಿಪ್ಪು ಹೆಸರನ್ನು ರಾಷ್ಟ್ರಪತಿಗಳು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಜೋರಾಗಿ ಮೇಜು ಕುಟ್ಟಿ ಸಂಭ್ರಮಿಸಿದರು. ಈ ವೇಳೆ ಬಿಜೆಪಿ ಶಾಸಕರು ಸಪ್ಪೆ ಮೋರೆ ಹಾಕಿ ಕುಳಿತಿದ್ದು ಕಂಡುಬಂತು.
ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ನಾಡು ನುಡಿಗೆ ಕೊಡುಗೆ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳ ಹೆಸರುಗಳನ್ನು ಸ್ಮರಿಸುವ ವೇಳೆ ಟಿಪ್ಪು ಸುಲ್ತಾನ್ ಹೆಸರನ್ನು ಉಲ್ಲೇಖಿಸಿದರು.
ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರ್ನಾಟಕದ ಪಾಲಿಗೆ ಇದೊಂದು ಅವಿಸ್ಮರಣೀಯ ದಿನ. ಕರ್ನಾಟಕಕ್ಕೆ ಕೊಡುಗೆಗಳನ್ನು ನೀಡಿದವರನ್ನು ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಕೋವಿಂದ್ ಸ್ಮರಿಸಿದರು. 3 ತಿಂಗಳ ಹಿಂದೆ ಇದೇ ದಿನ ನಾನು ಅಧಿಕಾರ ಸ್ವೀಕರಿಸಿದ್ದೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದೇನೆ. ಕರ್ನಾಟಕ ಕಲೆ, ಸಂಸ್ಕೃತಿಯ ಬೀಡು. ಶಿಕ್ಷಣ, ತಂತ್ರಜ್ಞಾನದಲ್ಲಿ ಇಲ್ಲಿನ ಹಲವರು ಕ್ರಾಂತಿ ಮಾಡಿದ್ದಾರೆ. ಸರ್ ಎಂ.ವಿಶ್ವೇಶ್ವರಯ್ಯ ನವ ಕರ್ನಾಟಕದ ನಿರ್ಮಾತೃ ಎಂದು ಬಣ್ಣಿಸಿದರು.
ಇದೇ ವೇಳೆ ಮುಖ್ಯಮಂತ್ರಿಗಳ ಹೆಸರುಗಳನ್ನು ಹೇಳುವ ವೇಳೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೆಸರು ಲಿಖಿತ ಭಾಷಣದಲ್ಲಿ ಬಿಟ್ಟು ಹೋಗಿತ್ತು. ಕೂಡಲೇ ರಾಷ್ಟ್ರಪತಿಗಳೇ ದೇವೇಗೌಡರ ಹೆಸರು ಪ್ರಸ್ತಾಪಿಸಿ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ದೇವೇಗೌಡರು ನನಗೆ ಆತ್ಮೀಯ ಮಿತ್ರರು. ನಾನು ಇಲ್ಲಿ ಕೆಲವರ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ ಎಂದು ನಗುತ್ತಲೇ ಉತ್ತರಿಸಿದರು. ಕರ್ನಾಟಕ ಮತ್ತು ದೇಶದ ಉತ್ತಮ ಭವಿಷ್ಯಕ್ಕಾಗಿ ಆಶಿಸುತ್ತೇನೆ ಎಂದು ತಮ್ಮ ಒಂದು ಗಂಟೆಯ ಭಾಷಣ ಮುಗಿಸಿದರು.
ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ಉಭಯ ಸದನದ ಪ್ರತಿಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯಸಭೆ ಸದಸ್ಯರು ಸೇರಿದಂತೆ ಪ್ರಮುಖರು ವಿಧಾನಸಭೆ ಸಭಾಂಗಣದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪು ಹೆಸರು ಪ್ರಸ್ತಾಪಿಸಿರುವ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.