ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರಿಗೆ ಸೂಚಿಸಿದ್ದೇ. ಆದರೆ,ಅಷ್ಟರೊಳಗೆ ಕಾಂಗ್ರೆಸ್ ಪಕ್ಷವೇ ನಡಹಳ್ಳಿಯವರನ್ನು ಉಚ್ಚಾಟಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ,ಕುಮಾರಸ್ವಾಮಿ ಹೇಳಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಡಹಳ್ಳಿಯವರು ಆತ್ಮಿಯ ಮಿತ್ರರು.ಹಿಂದೆಯೇ ನಡಹಳ್ಳಿ ಜೆಡಿಎಸ್‌ನಿಂದ ಸ್ಪರ್ಧಿಸಬೇಕಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎ.ಎಸ್.ಪಾಟೀಲ್ ನಡಹಳ್ಳಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಉಚ್ಚಾಟನೆಯಿಂದ ನಡಹಳ್ಳಿಯವರಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕಾನೂನು ಅಡ್ಡಿಯಾಗಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ರಾಷ್ಟ್ರಪತಿಯವರಿಗೆ ಗೌರವ ನೀಡಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ರಾಜ್ಯದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಸಾಕಷ್ಟು ಲೋಪದೋಷಗಳಿದ್ದವು. ಆದರೆ, ನಾನು ಲೋಪದೋಷಗಳ ಬಗ್ಗೆ ಮಾತನಾಡಲ್ಲ. ಫೋಟೋಸೆಷೆನ್‌ನಲ್ಲಿ ಯಾರಿಗೆ ಎಷ್ಟು ಗೌರವ ಕೊಡಬೇಕು ಎನ್ನುವುದನ್ನು ರಾಜ್ಯ ಸರಕಾರ ಕಲಿಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಇದು ಪ್ರತಿಷ್ಠೆಯ ವಿಷಯವಲ್ಲ. ಪೂರ್ವ ಸಿದ್ದತೆಯಿಲ್ಲದಿರುವುದರಿಂದ ನನಗೆ ಸ್ಥಾನ ನಿಗದಿ ಮಾಡಿಲ್ಲ. ಇದಕ್ಕೆ ಯಾವುದೋ ಅಧಿಕಾರಿಯನ್ನು ಬಲಿಪಶು ಮಾಡುವುದು ನನಗೆ ಇಷ್ಟವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.