Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಟ್ಟಣದಲ್ಲಿ ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆಯೊಂದು ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಸರ್ವಿಸ್ ರಸ್ತೆಯಲ್ಲಿರುವ ಅರವಿಂದ್ ಧುಮಳೆ ಅವರ ಮನೆಯಲ್ಲಿ ದರೋಡೆ ನಡೆದಿದೆ.
ಮನೆಯಲ್ಲಿ ಮಹಿಳೆಯರಿದ್ದು, ದರೋಡೆಕೋರರು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದಾರೆ. ಸುಮಾರು ಹತ್ತು ತೊಲೆಗೂ ಅಧಿಕ ಭಾರದ ಬಂಗಾರದ ಆಭರಣಗಳು ಲೂಟಿ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮನೆಗೆ ನುಗ್ಗಿದ ವ್ಯಕ್ತಿಗಳು ಮೊದಲಿಗೆ ಮನೆ ಕೆಲಸ ಮಾಡುವ ಮುನ್ಯಮ್ಮ ಎಂಬ ಮಹಿಳೆಯ ಬಾಯಿ ಒತ್ತಿಹಿಡಿದು ಮನೆಯೊಳಗೆ ನುಗ್ಗಿದ್ದಾರೆ. ಜೊತೆಯಲ್ಲಿ ಮಾರಕಾಸ್ತ್ರಗಳು ತೆಗೆದುಕೊಂಡು ಬಂದಿದ್ದು, ಮಹಿಳೆಯರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಓಡಿ ಹೋಗುವ ಭರದಲ್ಲಿ ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ಮನೆ ಕೆಲಸದ ಮಹಿಳೆ ತಿಳಿಸಿದ್ದಾರೆ.
ಸ್ಥಳಕ್ಕೆ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.