ಬ್ರಿಟನ್ ಇಂದು ಭಾರೀ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬ್ರಿಟನ್ ದೇಶ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ ಎಂದು ಆ ದೇಶದ ವಿತ್ತ ಸಚಿವ ಜೆರೆಮಿ ಹಂಟ್ ಘೋಷಿಸಿದ್ದಾರೆ. ಇದೀಗ ದೇಶವನ್ನು ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ತೆರಿಗೆ ಹೆಚ್ಚಳ ಮತ್ತು ವೆಚ್ಚ ಕಡಿತದ ನಿರ್ಧಾರವನ್ನು ರಿಷಿ ಸುನಕ್ ಸರ್ಕಾರ ಪ್ರಕಟಿಸಿದೆ. ಹದಗೆಟ್ಟಿರುವ ಸಾರ್ವಜನಿಕ ಹಣಕಾಸು ವ್ಯವಸ್ಥೆಗೆ ಪುನಶ್ಚೇತನ ನೀಡಲು 66 ಶತಕೋಟಿ ಡಾಲರ್ ಮೊತ್ತದ ವಿತ್ತೀಯ ಯೋಜನೆಯನ್ನು ಘೋಷಿಸಿದೆ. ಸಾರ್ವಜನಿಕ ವೆಚ್ಚ ನಿಯಂತ್ರಣ ಮತ್ತು ತೆರಿಗೆ ಏರಿಕೆಯನ್ನು ಇದು ಒಳಗೊಂಡಿದೆ. ಈ ಯೋಜನೆಯ ಭಾಗವಾಗಿ ಸಿರಿವಂತರಿಗೆ ಮತ್ತು ಇಂಧನ ಕಂಪನಿಗಳಿಗೆ ತೆರಿಗೆ ಹೆಚ್ಚಳ ಮಾಡಿದೆ. ಮತ್ತೊಂದು ಕಡೆ ಅಲ್ಲಿನ ಜನ ವೆಚ್ಚ ನಿಯಂತ್ರಣದ ಮೊರೆ ಹೋಗಿದ್ದಾರೆ.
ಬ್ರಿಟನ್‍ನಲ್ಲಿ ಕಳೆದ ತಿಂಗಳು ಹಣದುಬ್ಬರ ಪ್ರಮಾಣ ಶೇ.11.1ರಷ್ಟಿತ್ತು. ಇದು ಕಳೆದ 41 ವರ್ಷಗಳಲ್ಲಿಯೇ ಗರಿಷ್ಠ. ಈ ವರ್ಷ ಶೇ. 9.1ರಷ್ಟು, 2023ರಲ್ಲಿ 7.4ರಷ್ಟು ಹಣದುಬ್ಬರ ನಿರೀಕ್ಷಿಸಲಾಗಿದೆ.