ಪರೀಕ್ಷೆಯಲ್ಲಿ ನಕಲು ಮಾಡಿದಕ್ಕೆ ಶಿಕ್ಷಕರು ಬೈದಿದ್ದರಿಂದ ಮನನೊಂದು ಶಾಲಾ ವಿದ್ಯಾರ್ಥಿ ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನೂರ್ ನಗರದ ನಿವಾಸಿಯಾಗಿರುವ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಮೋಹಿನ್ ಖಾನ್ ನಿನ್ನೆ ಶಾಲೆಯಲ್ಲಿ ನಡೆದ ಇಂಗ್ಲೀಷ್ ಪರೀಕ್ಷೆಯಲ್ಲಿ ಕಾಪಿ ಹೊಡೆದಿದ್ದ. ಇದನ್ನ ಗಮನಿಸಿದ್ದ ಶಿಕ್ಷಕರು ಆತನನ್ನ ಬೈದು ಹೊರಕಳುಹಿಸಿದ್ದರು. ಕೊಂಚ ಸಮಯದ ಬಳಿಕ ಹೊರಗಡೆ ಬಂದು ನೋಡಿದಾಗ ಮೋಹಿನ್ ಖಾನ್ ನಾಪತ್ತೆಯಾಗಿದ್ದ. ಶಾಲಾ ಆವರಣದ ಸುತ್ತಮುತ್ತಾ ಹುಡುಕಾಡಿದರೂ ಮೋಹಿನ್ ಇರಲಿಲ್ಲ.ಸಂಜೆ ವೇಳೆಗೆ ಶಾಲಾ ಸಮೀಪದ ಅಪಾರ್ಟ್ ಮೆಂಟ್ ನ 14 ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆ ಸಂಬಂಧ ಪೋಷಕರು ಅಸಮಾಧಾನಗೊಂಡಿದ್ದು ಶಾಲಾ ಶಿಕ್ಷಕರ ನಿರ್ಲಕ್ಷ್ಯದಿಂದ ಮಗನ ಸಾವು ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಶಾಲೆಯವರು ಆತ ಕಾಪಿ ಹೊಡೆದು ಸಿಕ್ಕಾಕಿಕೊಂಡ ತಕ್ಷಣ ಪೋಷಕರಿಗೆ ಹೇಳಬಹುದಿತ್ತು.ಸೆಕ್ಯೂರಿಟಿ ಗಾರ್ಡ್ ಹೊರಬಿಡಬಾರದಿತ್ತು. ತಡವಾಗಿ ಕರೆ ಮಾಡಿ ಮಾಹಿತಿ ನೀಡಿದ್ದರು. ನಾವು ಬೆಳಗ್ಗೆಯಿಂದ ಹುಡುಕಿದೆವು. ಮಗ ಪತ್ತೆಯಾಗಿರಲಿಲ್ಲ.ಠಾಣೆಗೆ ದೂರು ಕೊಡಲು ಹೋಗಿದ್ದೇವು. ಸಂಜೆ ಹೊತ್ತಿಗೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದಿರುವ ವಿಚಾರ ಗೊತ್ತಾಗಿದೆ. ಶಾಲೆ ಬೇಜವಾಬ್ದಾರಿ ಎದ್ದು ಕಾಣ್ತಿದೆ.ಈ ಮಗುಗೆ ಆಗಿದ್ದು ಬೇರೆಯವರಿಗೆ ಆಗಬಾರದು ಎಂದು ಕಣ್ಣೀರು ಹಾಕಿದರು.
ಘಟನೆ ಸಂಬಂಧ ಆತ್ಮಹತ್ಯೆ ಗೆ ಪ್ರಚೋದನೆ ಅಡಿಯಲ್ಲಿ ಶಿಕ್ಷಕರ ವಿರುದ್ಧ ಕೇಸ್ ದಾಖಲಾಗಿದೆ.