ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿ ಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು, ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಆದೇಶವಿದ್ದರೂ ಅದನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮುನ್ನ ಜಿಲ್ಲಾಡಳಿತ ಪರಿಣಾಮದ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನ ಕೆಡವಿ ಹಾಕಿದ ಘಟನೆ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೊಸ ನಿವೇಶನ ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ನೂತನ ದೇವಸ್ಥಾನವನ್ನು ರಾಜ್ಯ ಸರ್ಕಾರವೇ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.