ವಿ.ಕೆ. ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನ ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಉಚ್ಚಾಟಿಸಿದ ಬಳಿಕ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಟಿಟಿವಿ ದನಕರನ್ ಬೆಂಬಲಿತ ಶಾಸಕರು ವಾಸ್ತವ್ಯ ಹೂಡಿದ ಹಿನ್ನೆಲೆಯಲ್ಲಿ ಕರ್ನಾಟಕದ ರೆಸಾರ್ಟ್`ಗೆ ತಮಿಳುನಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೌದು, ಕೊಡಗಿನ ಸುಂಟಿಕೊಪ್ಪದ ತೋಂಡೂರು ಗ್ರಾಮದ ಬಳಿ ಇರುವ ಪ್ಯಾಡಿಂಗ್ಟನ್ ರೆಸಾರ್ಟ್`ಗೆ ಆಗಮಿಸಿದ್ದ ತಮಿಳುನಾಡಿನ ನೂರಾರು ಪೊಲೀಸರು ಪರಿಶೀಲನೆ ನಡೆಸಿ ತೆರಳಿದ್ದಾರೆ. ಟಿಟಿವಿ ದಿನಕರನ್ ಬೆಂಬಲಿತ 19 ಶಾಸಕರು ಸಿಎಂ ಪಳನಿಸ್ವಾಮಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಒಂದೊಮ್ಮೆ ವಿಶ್ವಾಸಮತ ಸಾಬೀತಿಗೆ ಗವರ್ನರ್ ಸೂಚಿಸಿದರೆ ಪಳನಿಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ,
ಹೀಗಾಗಿ, ಟಿಟಿವಿ ದಿನಕರನ್ ಬೆಂಬಲಿತ 19 ಶಾಸಕರು ಪ್ಯಾಂಡಿಂಗ್ಟನ್ ರೆಸಾರ್ಟ್`ನಲ್ಲಿ ವಾಸ್ತವ್ಯ ಹೂಡಿರುವ ಸಂಶಯದ ಹಿನ್ನೆಲೆಯಲ್ಲಿ ಸಿಎಂ ಪಳನಿಸ್ವಾಮಿ ಆದೇಶದ ಹಿನ್ನೆಲೆಯಲ್ಲಿಯೇ ತಮಿಳುನಾಡು ಪೊಲೀಸರು ದಾಳಿ ನಡೆಸಿದ್ದರು ಎಂದು ತಿಳಿದುಬಂದಿದೆ. 14 ಶಾಸಕರು ಇಲ್ಲಿ ವಾಸ್ತವ್ಯ ಹೂಡಿದ್ದು, ಅದರಲ್ಲಿ ಇಬ್ಬರು ಶಾಸಕರು ತಮ್ಮನ್ನ ಬಲವಂತವಾಗಿ ಇಲ್ಲಿಡಲಾಗಿದೆ ಎಂದು ಪೊಲಿಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. 14 ಶಾಸಕರನ್ನೂ ಭೇಟಿಯಾಗಿ ಪೊಲೀಸರು ಪ್ರತ್ಯೇಕ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ