ಬೆಂಗಳೂರು: ತಮ್ಮದೇ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೊಳಗಾಗಿರುವ ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆ ಇಂದು ನಡೆಯಲಿದೆ.
ಎರಡು ದಿನಗಳ ಹಿಂದೆ ಸಂತ್ರಸ್ತ ನೀಡಿದ ದೂರಿನನ್ವಯ ಜೆಡಿಎಸ್ ಎಂಲ್ಸಿ ಸೂರಜ್ ರೇವಣ್ಣನನ್ನು ಪೊಲೀಸರು ಬಂಧಿಸಿದ್ದರು. ಇದೀಗ ವಿಚಾರಣೆಗಾಗಿ ಆರು ದಿನಗಳಿಗೆ ಅವರನ್ನು ಸಿಐಡಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ. ಇಂದು ಸೂರಜ್ ರೇವಣ್ಣರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 16 ರಂದು ತನ್ನ ಮೇಲೆ ಹೊಳೆನರಸೀಪುರದ ಫಾರ್ಮ್ ಹೌಸ್ ನಲ್ಲಿ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಯುವಕನೊಬ್ಬ ದೂರು ನೀಡಿದ್ದ. ಆತನ ದೂರಿನನ್ವಯ ಪೊಲೀಸರು ಸೂರಜ್ ರೇವಣ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಕೇಸ್ ನ್ನು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೊಪ್ಪಿಸಿದೆ. ಎಚ್ ಡಿ ರೇವಣ್ಣ ಪುತ್ರರಿಬ್ಬರೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವುದು ವಿಪರ್ಯಾಸ. ಆ ಪೈಕಿ ಇನ್ನೋರ್ವ ಪುತ್ರ ಪ್ರಜ್ವಲ್ ರೇವಣ್ಣ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಡೀ ರೇವಣ್ಣ ಕುಟುಂಬವೇ ಈಗ ಕೋರ್ಟ್, ಕೇಸ್ ಎಂದು ಅಲೆದಾಡುವಂತಾಗಿದೆ. ಜೊತೆಗೆ ದೇವೇಗೌಡರ ಕುಟುಂಬಕ್ಕೆ ಈ ಇಬ್ಬರು ಮೊಮ್ಮಕ್ಕಳ ಪ್ರಕರಣಗಳು ಮುಜುಗರವುಂಟು ಮಾಡಿದೆ. ಹೀಗಾಗಿ ಈ ಪ್ರಕರಣದಿಂದ ಎಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಈಗಾಗಲೇ ಅಂತರ ಕಾಯ್ದುಕೊಂಡಿದ್ದಾರೆ.