ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಈಗ ವಿಐಪಿಗಳ ತಾಣವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ನ್ಯಾಯಾಂಗ ಬಂಧನಕ್ಕೀಡಾಗಿದ್ದು ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಶನಿವಾರದಿಂದ ನ್ಯಾಯಾಂಗ ಬಂಧನಕ್ಕೊಳಗಾಗಿದ್ದು ಜುಲೈ 3 ರವರೆಗೆ ಅವರ ನ್ಯಾಯಾಂಗ ಬಂಧನ ಅವಧಿಯಿರಲಿದೆ. ಶನಿವಾರವೇ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ಇನ್ನು, ಇದಕ್ಕೆ ಮೊದಲು ಪರಪ್ಪನ ಅಗ್ರಹಾರದದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣರನ್ನು ವಿಚಾರಣೆಗೆಂದು ಎಸ್ ಐಟಿ ವಶಕ್ಕೊಪ್ಪಿಸಲಾಗಿತ್ತು. ಇಂದು ಅವರನ್ನೂ ಮತ್ತೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಜುಲೈ 8 ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೀಗಾಗಿ ಈಗ ದರ್ಶನ್ ಜೊತೆಗೆ ಪ್ರಜ್ವಲ್ ಕೂಡಾ ಪರಪ್ಪನ ಅಗ್ರಹಾರಕ್ಕೆ ಬಂದು ಸೇರಲಿದ್ದಾರೆ. ಪ್ರಜ್ವಲ್ ಜೊತೆಗೆ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಸದ್ಯಕ್ಕೆ ಅವರನ್ನು ವಿಚಾರಣೆಗೆಂದು ಸಿಐಡಿ ವಶಕ್ಕೆ ನೀಡಲಾಗಿದೆ. ವಿಚಾರಣೆ ಬಳಿಕ ಅವರೂ ಪರಪ್ಪನ ಅಗ್ರಹಾರಕ್ಕೆ ಬಂದು ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಒಂದು ರೀತಿಯಲ್ಲಿ ಪರಪ್ಪನ ಅಗ್ರಹಾರ ಈಗ ವಿಐಪಿಗಳ ಕೇಂದ್ರವಾಗಿದೆ.