ದಾರಿಯಲ್ಲಿ ಹೋಗೋ ದಾಸಯ್ಯ ಮುಖ್ಯಮಂತ್ರಿ ಆಗಿದ್ದರೂ ಅಂಬರೀಶ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುತ್ತಿದ್ದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅವರ ಹೆಸರಿನಲ್ಲಿ ಸ್ಮಾರಕ ಮಾಡಿದ್ದು ನಾನೇ. ವಿಷ್ಣುವರ್ಧನ್ ಸ್ಮಾರಕ ಇನ್ನೂ ಆಗಿಲ್ಲ ಎಂಬ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಅಂಬರೀಶ್ ಅಂತ್ಯ ಸಂಸ್ಕಾರ ಮಂಡ್ಯದಲ್ಲಿ ನಡೆಸಿದ್ದು ಹೇಗೆ ಎಂಬುದು ನಮಗೆ ಗೊತ್ತಿದೆ. ಸ್ಮಾರಕ ಮಾಡಲು ಮನವಿ ಮಾಡಲು ಹೋದ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಅವರನ್ನು ಎರಡೂವರೆಗೆ ಗಂಟೆ ಕಾಯಿಸಿದ್ದಾರೆ. ಅಲ್ಲದೇ ಅವನು ಏನ್ ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಮಾಡಬೇಕು? ನಾನ್ಯಾಕೆ ಸ್ಮಾರಕ ಕಟ್ಟಲಿ ಎಂದು ಮನವಿ ಪತ್ರದ ಪೇಪರ್ ಗಳನ್ನು ಹರಿದು ಅವರ ಮುಖದ ಮೇಲೆ ಕುಮಾರಸ್ವಾಮಿ ಎಸೆದಿದ್ದರು. ಆ ವೀಡಿಯೋ ನನ್ನ ಬಳಿ ಈಗಲೂ ಇದೆ ಎಂದು ಸುಮಲತಾ ಗಂಭೀರ ಆರೋಪ ಮಾಡಿದರು.
ಕುಮಾರಸ್ವಾಮಿ ಹೀಗೆ ಮಾತನಾಡುತ್ತಲೇ ಇರಬೇಕು. ಅವರ ವ್ಯಕ್ತಿತ್ವ, ನಿಜ ರೂಪ ಜನಕ್ಕೆ ಗೊತ್ತಾಗಿದೆ. ಒಂದು ಸಲ ಜನರು ಬುದ್ದಿ ಕಲಿಸಿದ್ದಾರೆ. ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡಿದರೆ ಇನ್ನೊಮ್ಮೆ ಬುದ್ದಿ ಕಲಿಸುತ್ತಾರೆ ಎಂದು ಸುಮಲತಾ ಸವಾಲು ಹಾಕಿದರು.
ಡೀಲ್ ಮಾಡಲು ನನ್ನ ಎಡ-ಬಲ ಯಾರೂ ಇಲ್ಲ, ಏಜೆಂಟರನ್ನು ಇಟ್ಟುಕೊಂಡು ಡೀಲ್ ಮಾಡಿಸುವುದು ನಿಮ್ಮ ಅಭ್ಯಾಸ. ನನ್ನ ವಿರುದ್ಧ ಶ್ರೀಂಠಯ್ಯನನ್ನು ಎತ್ತಿ ಕಟ್ಟಿ ಹೇಳಿಕೆ ಕೊಡಿಸುತ್ತಿದ್ದೀರಿ ಎಂದು ಸುಮಲತಾ ಸ್ಪಷ್ಟಪಡಿಸಿದರು.