ರಾಜ್ಯ ಸರ್ಕಾರದ ವಿರುದ್ಧ ಕೆಎಸ್ಆರ್ಟಿಸಿ ಸಾರಿಗೆ ನೌಕರರು ಮತ್ತೊಮ್ಮೆ ಮುಷ್ಕರ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ತಮ್ಮ ಬೇಡಿಕೆ ಈಡೇರಿಸಲು ವಿಫಲವಾದ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂದೆ ಕೂಡ ಬೇಡಿಕೆ ಈಡೇರಿಕೆಗಾಗಿ ನೌಕರರು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಮುಷ್ಕರ ಮಾಡಿದ್ದರು. ಆದ್ರೆ ಇದರಿಂದ ಫಲ ಸಿಗದ ಹಿನ್ನೆಲೆ ಅಧಿವೇಶನದ ಹೊಸ್ತಿಲಲ್ಲಿ, ಮತ್ತೆ ಹೋರಾಟಕ್ಕೆ ಸಾರಿಗೆ ನೌಕರರು ಸಜ್ಜಾಗಿದ್ದಾರೆ.ವಿವಿಧ ಬೇಡಿಕೆಗಳೊಂದಿಗೆ ಮತ್ತೊಮ್ಮೆ ಧರಣಿಗೆ ಮುಂದಾಗಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ನಾಲ್ಕು ನಿಗಮದ ಸಾವಿರಾರು ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸಾರಿಗೆ ನೌಕರರ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ಸಂಬಂಧ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.