ಬೆಂಗಳೂರು : ಎನ್ಡಿಎ ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ (ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಸಮಾರಂಭ-2022ರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಪಾಲ್ಗೊಂಡು, ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ,
ತಳ ಹಂತ ಪೊಲೀಸರು ಹಾಗೂ ಐಪಿಎಸ್ಗಳ ತರಬೇತಿ ಚೆನ್ನಾಗಿ ಆಗುತ್ತಿದೆ. ಆದರೆ ಮಧ್ಯಮ ಹಂತದಲ್ಲಿ ಪೊಲೀಸರ ತರಬೇತಿ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ. ಇದಕ್ಕೆ ಪ್ರತ್ಯೇಕ ತರಬೇತಿ ಸಂಸ್ಥೆ, ಪಠ್ಯ ಹಾಗೂ ವಿವಿಧ ಕೋರ್ಸುಗಳ ಮೂಲಕ ಅವರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಹಾಯವಾಗುತ್ತದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ತಂತ್ರಜ್ಞಾನದ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಅದೇ ತಂತ್ರಜ್ಞಾನದಲ್ಲಿ ಸಾಕ್ಷಿಗಳನ್ನು ಬಿಟ್ಟು ಹೋಗಿರುತ್ತಾರೆ.
ಗೃಹ ಇಲಾಖೆ ಪೊಲೀಸರು ಬಳಸುವ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ರಮವನ್ನು ಮಾಡಬೇಕು. ಅದಕ್ಕೆ ಬೇಕಾದ ಪರಿಣಿತರನ್ನು ಬಳಸಿಕೊಂಡು, ಬೇಕಾದ ಅನುದಾನ ಮುಂದಿನ ಬಜೆಟ್ನಲ್ಲಿ ನೀಡಲಾಗುವುದು ಎಂದು ತಿಳಿಸಿದರು.