ಬೆಂಗಳೂರು: ಸಮಾಜದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲರೂ ಇವುಗಳಿಗೆ ಪರಿಹಾರದ ನಿರೀಕ್ಷೆ ಯಲ್ಲಿದ್ದಾರೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ರಾಜ್ಯ ಸರಕಾರದ ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರದ ಭಾಗವಾದ ಸೈಸೆಕ್ ಕೇಂದ್ರದ 'ಸೈಬರ್ ವಾರ್ತಿಕಾ' ಮಾಸಿಕದ ವಾರ್ಷಿಕ ಸಂಚಿಕೆಯನ್ನು ಅವರು ಗುರುವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಬಳಸುವ ಮುನ್ನ ಅದರ ಬಗ್ಗೆ ಸರಿಯಾದ ಜಾಗೃತಿ ಇರಬೇಕಾದ್ದು ಅಗತ್ಯವಾಗಿದೆ ಎಂದರು.
ಈ ಮಾಸಿಕದಲ್ಲಿ ಸೈಬರ್ ವಂಚನೆಗಳ ಮಾಹಿತಿ ಮತ್ತು ಅಂಕಿಅಂಶಗಳು, ಉಲ್ಲಂಘನೆ, ಮಾಹಿತಿಯುಕ್ತ ಪೋಸ್ಟರುಗಳು ಮತ್ತು ಸ್ಪರ್ಧೆಗಳು ಇರುತ್ತವೆ ಎಂದು ಅವರು ನುಡಿದರು.
ಕೋವಿಡ್ ನಂತರದ ಕಾಲಘಟ್ಟದಲ್ಲಿ ಸೈಬರ್ ಸುರಕ್ಷತೆಯು ಅತ್ಯಂತ ಅಗತ್ಯವಾಗಿದೆ. ಯುವಜನರು ಮತ್ತು ಹಿರಿಯರಿಬ್ಬರೂ ಈ ಬಗ್ಗೆ ಅರಿವು ಬೆಳೆಸಿ ಕೊಳ್ಳಬೇಕು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್, ಸೈಸೆಕ್ ಮುಖ್ಯಸ್ಥ ಡಾ.ಕಾರ್ತಿಕ್ ರಾವ್ ಬಪ್ಪನಾಡು, ಕೆಎಸ್ಸಿಎಸ್ಟಿ ಕಾರ್ಯದರ್ಶಿ ಪ್ರೊ.ಅಶೋಕ ರಾಯಚೂರು, ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್.ಹೇಮಂತಕುಮಾರ್, ಪ್ರೊ.ನಾಗರತ್ನ ಮುಂತಾದ ವರಿದ್ದರು.