Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜೈಲಿನಲ್ಲಿರುವ ಆರ್‌ಆರ್‌ನಗರ ಶಾಸಕ ಮುನಿರತ್ನ ಮನೆ ಮೇಲೆ ಎಸ್‌‍ಐಟಿ ದಿಢೀರ್‌ ದಾಳಿ

ಜೈಲಿನಲ್ಲಿರುವ ಆರ್‌ಆರ್‌ನಗರ ಶಾಸಕ ಮುನಿರತ್ನ ಮನೆ ಮೇಲೆ ಎಸ್‌‍ಐಟಿ ದಿಢೀರ್‌ ದಾಳಿ

Sampriya

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (14:29 IST)
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ನಿವಾಸದ ಮೇಲೆ ಇಂದು ಎಸ್‌‍ಐಟಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವೈಯಾಲಿ ಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳ ಮೇಲೆ ಎಸಿಪಿ ಕವಿತಾ ನೇತೃತ್ವದ ಎಸ್‌‍ಐಟಿ ತಂಡ ಏಕಕಾಲಕ್ಕೆ ಈ ದಾಳಿ ನಡೆಸಿದೆ.

ಇಂದು ಮುಂಜಾನೆ ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಎಫ್ಎಸ್ಎಲ್​ ತಂಡದೊಂದಿಗೆ ತೆರಳಿ ಎಸ್​ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಮೊದಲು ಮುನಿರತ್ನ ಬಂಧನವಾಗಿತ್ತು. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದಾದ ಮರುದಿನವೇ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು.

ಈ ನಡುವೆ ಮುನಿರತ್ನ ಅವರ ವಿರುದ್ಧ ಒಂದೊಂದೆ ಪ್ರಕರಣಗಳು ಹೊರ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಎಸ್‌‍ಐಟಿ ರಚಿಸಿತ್ತು. ಇದೀಗ ಸಿಐಡಿಯ ವಿಶೇಷ ತನಿಖಾ ದಳದ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮುನಿರತ್ನ ಅವರನ್ನು ತಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಪ್ರಕರಣದ ಬೆನ್ನು ಬಿದ್ದಿರುವ ಎಸ್‌‍ಐಟಿ ಅಧಿಕಾರಿಗಳು, ಮುನಿರತ್ನ ಅವರ ನಿವಾಸ ಮತ್ತವರ ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಪಂಚತಾರಾ ಹೊಟೇಲ್ ತಾಜ್ ವೆಸ್ಟ್ ಅಂಡ್‌ಗೆ ಬಾಂಬ್ ಬೆದರಿಕೆ: ತನಿಖೆ ತೀವ್ರ