ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡುವ ತೀರ್ಮಾನ ಮಾಡಿದ್ದು BJP ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ. ಈ ಮೂಲಕ ಏರ್‌ಪೋರ್ಟ್‌ಗೆ ಕೆಂಪೇಗೌಡರ ಹೆಸರಿಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ, ಹುಟ್ಟುವ ಮಗುವಿಗೆಲ್ಲಾ ನಾಮಕರಣ ಮಾಡಿದ್ದು ನಾನೇ ಎನ್ನುವಂತೆ ಹೇಳಿಕೊಳ್ಳುವ ಸಿದ್ದರಾಮಯ್ಯನವರೇ. ಬೆಂಗಳೂರು ಏರ್‌ಪೋರ್ಟ್‌ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡುವ ತೀರ್ಮಾನ ಮಾಡಿದ್ದು ಅಂದಿನ BJP ಸರ್ಕಾರ. ಫೆಬ್ರವರಿ 27, 2009ರಂದು ಅಂದಿನ ಮುಖ್ಯಮಂತ್ರಿ B.S.ಯಡಿಯೂರಪ್ಪ ನೇತೃತ್ವದ BJP ಸರ್ಕಾರ ಏರ್‌ಪೋರ್ಟ್‌ಗೆ ಕೆಂಪೇಗೌಡರ ಹೆಸರಿಡಲು ಕೆಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದಿದ್ದಾರೆ. ಆದರೆ, ಕೆಂಪೇಗೌಡರ ಹೆಸರನ್ನು ಏರ್‌ಪೋರ್ಟ್‌ಗೆ ಇಡಬೇಕೊ ಬೇಡವೊ ಎಂದು ತೀರ್ಮಾನ ಮಾಡಲು ಅಂದಿನ UPA ಸರ್ಕಾರ ತೆಗೆದುಕೊಂಡ ಸಮಯ ಬರೋಬ್ಬರಿ 4 ವರ್ಷ. ಟಿವಿ ಕ್ಯಾಮರಾ ಮುಂದೆ ಬಂದು ಒಳ್ಳೆಯದಕ್ಕೆಲ್ಲಾ ನಾನೇ ಕಾರಣ ಎನ್ನುವ ಸಿದ್ದರಾಮಯ್ಯರೇ, BJP ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ 4 ವರ್ಷ ನಿಮ್ಮ UPA ಸರ್ಕಾರ ಕಾಯಿಸಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.