Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಸ್ಥಾನ ಕಳೆದುಕೊಳ್ಳುವ ಭಯಕ್ಕೆ ಸಿದ್ದರಾಮಯ್ಯ ಜಾತಿಗಣತಿ ಮಾಡ್ತಿದ್ದಾರೆ

BY Vijayendra

Krishnaveni K

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (12:12 IST)
ಬೆಂಗಳೂರು: ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸತತವಾಗಿ 3ನೇ ಬಾರಿಗೆ ಅಧಿಕಾರ ಪಡೆಯುವತ್ತ ದಾಪುಗಾಲು ಹಾಕುತ್ತಿರುವುದು ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ದೂಳೀಪಟ ಆಗುವುದಾಗಿ ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದವು. ಕಾಂಗ್ರೆಸ್ ಪಕ್ಷ ಅಧಿಕಾರ ಗಳಿಸುವ ಭ್ರಮೆಯಲ್ಲಿತ್ತು. ಎಲ್ಲ ಪಿತೂರಿಗಳ ನಡುವೆ ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತೆ ಜಯಭೇರಿ ನಿಟ್ಟಿನಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದ ಬಳಿಕ ಚುನಾವಣೆ ನಡೆದಿದೆ. ಅಭಿವೃದ್ಧಿ ಕೆಲಸಗಳೂ ಆಗುತ್ತಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎಂದರು.
ಗೌರವಾನ್ವಿತ ಈಶ್ವರಪ್ಪನವರು ಹಿರಿಯರಿದ್ದಾರೆ. ನಿನ್ನೆಯ ಅವರ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇನೆ. ಸತ್ಸಂಪ್ರದಾಯ, ಸಂಸ್ಕತಿ ಬೆಳೆಸಬೇಕು, ಉಪನ್ಯಾಸ, ಭ್ರಷ್ಟಾಚಾರದ ಕುರಿತು ಅನೇಕ ಒಳ್ಳೆಯ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ನಾನು ಕಿರಿಯ ವಯಸ್ಸಿನವನು. ಈಶ್ವರಪ್ಪನವರಿಗೆ ಒಳ್ಳೆಯದಾಗಲಿ; ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
 
ಕಾಂಗ್ರೆಸ್ ಮುಖಂಡರ ವಿರೋಧದ ನಡುವೆ ಜಾತಿಗಣತಿ ಮಂಡನೆ

ರಾಜ್ಯ ಸರಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶ ಇದೆಯೇ? ಎಂಬುದು ಮೊದಲ ಯಕ್ಷ ಪ್ರಶ್ನೆ. 5 ವರ್ಷಗಳ ಕಾಲ ತಾವು ಮುಖ್ಯಮಂತ್ರಿ ಆಗಿ ಇದ್ದಿರಿ. ನಿಮ್ಮ ಅವಧಿಯಲ್ಲಿ 165 ಕೋಟಿ ಖರ್ಚು ಮಾಡಿ ಈ ವರದಿ ತಯಾರಿಸಲಾಗಿದೆ. ಅದರಲ್ಲಿ ಲೋಪದೋಷದ ಕುರಿತು ನಿಮ್ಮ ಪಕ್ಷದ ಹಿರಿಯರೇ ಮಾತನಾಡುತ್ತಿದ್ದಾರೆ. ಸಿಎಂ ಸ್ಥಾನ ಕಳಕೊಳ್ಳುವ ಆತಂಕವೇ? ಯಾಕೆ ಆತುರಾತುರವಾಗಿ ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೀರಿ? ಎಂದು ಕೇಳಿದರು.
 
 ಮುಖ್ಯಮಂತ್ರಿ ಸ್ಥಾನದಲ್ಲಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಮನವರಿಕೆ ಆಗಿದೆ. ತಾನು ಅಪರಾಧಿ ಸ್ಥಾನದಲ್ಲಿದ್ದು, ಬಹಳ ದಿನ ಈ ಭಂಡತನ ನಡೆಯದು ಎಂದು ಅವರಿಗೆ ಗೊತ್ತಾಗಿದೆ. ಹಾಗಾಗಿ ಬ್ರಹ್ಮಾಸ್ತ್ರ ಚಲಾವಣೆ ಮಾಡುವ ಪ್ರಯತ್ನದಲ್ಲಿದ್ದಂತೆ ಕಾಣುತ್ತಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಜಾತಿ ಗಣತಿಯನ್ನು ತರಾತುರಿಯಲ್ಲಿ ಕ್ಯಾಬಿನೆಟ್‍ನಲ್ಲಿ ಮಂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡರೂ ಇದನ್ನು ವಿರೋಧಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಈ ವರದಿ ಅವೈಜ್ಞಾನಿಕವಾಗಿದೆ ಎಂದು ಹಲವಾರು ಬಾರಿ ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ ಎಂದರಲ್ಲದೆ, ಹಿಂದುಳಿದ ಸಮಾಜ, ಪರಿಶಿಷ್ಟ ಜಾತಿ, ಪಂಗಡಗಳು, ಎಲ್ಲ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶಕ್ತಿ ಕೊಡಬೇಕು. ಅವರನ್ನೂ ಮುಂಚೂಣಿಯಲ್ಲಿ ತರಬೇಕೆಂಬುದು ಬಿಜೆಪಿ ನಿಲುವು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೇಶದ, ರಾಜ್ಯದ ಸೌಲಭ್ಯ ಸಿಗಬೇಕೆಂಬ ಆಶಯವುಳ್ಳ ಅಂತ್ಯೋದಯದ ಪರಿಕಲ್ಪನೆಯ ಮೂಲ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಮಹರ್ಷಿ ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ, ಮೈಸೂರಿನ ಮುಡಾ ಹಗರಣ, ಮುಖ್ಯಮಂತ್ರಿಗಳ ಬುಡವನ್ನೇ ಅಲ್ಲಾಡಿಸಿರುವ ಈ ಸಂದರ್ಭದಲ್ಲಿ, ಸಿಎಂ ಕುರ್ಚಿ ಅಲ್ಲಾಡುತ್ತಿರುವ ಈ ಕಾಲಘಟ್ಟದಲ್ಲಿ ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಿಗೂ ಅನಿಸಿದೆ ಎಂದು ಪ್ರಶ್ನೆಗೆ ಉತ್ತರ ನೀಡುವ ವೇಳೆ ವಿಶ್ಲೇಷಿಸಿದರು.
ಜಾತಿ ಜನಗಣತಿ ಬಗ್ಗೆ ರಾಷ್ಟ್ರೀಯ, ರಾಜ್ಯಮಟ್ಟಗಳಲ್ಲಿ ಚರ್ಚೆ ಮಾಡಬೇಕು. ನಂತರ ನಿರ್ಣಯಿಸುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಇದು ಅವೈಜ್ಞಾನಿಕ; ಮತ್ತೊಮ್ಮೆ ಪರಿಶೀಲಿಸಿ ಎಂದು ಶಾಮನೂರು ಶಿವಶಂಕರಪ್ಪ ಅವರೂ ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಗಮನ ಸೆಳೆದರು.

ಆ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬ ಬದ್ಧತೆ ಬಿಜೆಪಿಗೆ ಇದೆ; ಅದರ ಬಗ್ಗೆ ಗೊಂದಲ ಬೇಡ; ಆದರೆ, ಇದನ್ನು ರಾಜಕೀಯ ದಾಳವಾಗಿ ಬಳಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಇದು ಖಂಡಿತ ಸಾಧ್ಯವಾಗುವುದಿಲ್ಲ. ಇದರ ಹಿಂದೆ ರಾಜಕೀಯ ಷಡ್ಯಂತ್ರ, ಕುತಂತ್ರ ಇರುವುದಾಗಿ ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದಲ್ಲಿ ನಾವೇ ಅಧಿಕಾರಕ್ಕೆ ಬರೋದು ಅಂತಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದೆ: ಬಿವೈ ವಿಜಯೇಂದ್ರ