ಬೆಂಗಳೂರು: ಪರ-ವಿರೋಧದ ಚರ್ಚೆ ನಡುವೆಯೂ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಅಕ್ಟೋಬರ್ 18 ರಂದು ಜಾತಿಗಣತಿ ವರದಿ ಮಂಡನೆಯಾಗಲಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಕಾಂತರಾಜು ವರದಿ ಮಂಡಿಸಿ ಚರ್ಚೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಜಾತಿಗಣತಿ ವರದಿ ಪ್ರಕಟಿಸುವಂತೆ ಹಿಂದುಳಿದ ವರ್ಗಗಳ ಸಚಿವರು, ಶಾಸಕರಿಂದ ಒತ್ತಡ ಕೇಳಿಬಂದಿತ್ತು. ವರದಿ ಮಂಡನೆಗೆ ಒತ್ತಡ ಹೆಚ್ಚಾಗಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ.
ಮುಂದೇನಾಗಬಹುದು?
ಜಾತಿಗಣತಿ ವರದಿ ಪ್ರಕಟ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ಸಾಧ್ಯತೆಯಿದೆ. ಜಾತಿಗಣತಿ ವರದಿ ಜಾರಿಗೆ ಸಂಪುಟದ ಒಪ್ಪಿಗೆ ಬಳಿಕ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಈ ವೇಳೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ಎದುರಾಗುವ ಸಾಧ್ಯತೆಯಿದೆ. ಜಾತಿ ವರದಿಗೆ ಅನುಗುಣವಾಗಿ ಆರ್ಥಿಕ ಅನುದಾನ ಹಂಚಿಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ.
ಒಂದೆಡೆ ಒಳಮೀಸಲಾತಿಗಾಗಿ ಬಿಜೆಪಿ ಹೋರಾಟ ನಡೆಸಲು ಸಜ್ಜಾಗಿದ್ದು, ಇದರ ನಡುವೆಯೇ ರಾಜ್ಯ ಸರ್ಕಾರ ಜಾತಿಗಣತಿ ವರದಿ ಪ್ರಕಟಿಸಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಪರೋಕ್ಷವಾಗಿ ಮುಂದಾಗಿದೆ ಎಂದೂ ವಿಶ್ಲೇಷಿಸಲಾಗಿದೆ. ಇನ್ನೊಂದೆಡೆ ಜಾತಿಗಣತಿ ಅವೈಜ್ಞಾನಿಕ ಎಂಬ ಆರೋಪಗಳೂ ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಮೊದಲು ವರದಿ ಬರಲಿ, ವರದಿಯಲ್ಲಿ ಏನಿದೆ ಎಂದು ತಿಳಿದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.