ಒಂಟಿಯಾಗಿ ತಿರುಗಾಡುತ್ತಿದ್ದ ಮಹಿಳೆಯರು ಹಾಗೂ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಪಂಚ್ ನಿಂದ ಮುಖಕ್ಕೆ ಗುದ್ದಿ ಅವರ ಬಳಿ ಇದ್ದ ಚಿನ್ನಾಭರಣ, ಹಣ ಸುಲಿಯುತ್ತಿದ್ದ ಖದೀಮನಿಗೆ ಕೊನೆಗೂ ಗುಂಡೇಟು ಬಿದ್ದಿದೆ.
ಬಿಸಿಲೂರು ಖ್ಯಾತಿಯ ಕಲಬುರಗಿ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಒಬ್ಬಂಟಿಯಾಗಿ ಓಡಾಡುತ್ತಿದ್ದವರನ್ನು ಗುರಿಯಾಸಿಕೊಂಡು ಅವರ ಮುಖಕ್ಕೆ ಪಂಚ್ ಮಾಡಿ ಚಿನ್ನ, ಹಣ, ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದ ಕುಖ್ಯಾತ ದರೋಡೆಕೋರರನ ಮೇಲೆ ಪೊಲೀಸರು ಗುಂಡು ಹಾರಿಸಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮೋಮಿನಪುರ ಬಡಾವಣೆಯ ಮಹ್ಮದ್ ಜಹೀರ್ ಇಮಾಮ್ ಪಟೇಲ್ (30) ಎಂಬಾತನನ್ನೇ ಬಂಧಿಸಿ 20 ಮೊಬೈಲ್, 3 ಪಂಚ್, 2 ಬೈಕ್ ಮತ್ತು ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ಸ್ಥಳಕ್ಕೆ ತೆರಳಿದಾಗ ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಎಂ.ಬಿ.ನಗರ ಪಿಎಸ್ಐ ಶರಣಬಸಪ್ಪ ಕೋಡ್ಲಾ ಅವರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಸುತ್ತು ಗುಂಡು ಗಾಳಿಯಲ್ಲಿ, ಮತ್ತೊಂದು ಸುತ್ತು ದರೋಡೆಕೋರನ ಮೇಲೆ ಹಾರಿಸಿದ್ದು, ದರೋಡೆಕೋರನ ಒಂದು ಕಾಲಿಗೆ ಗುಂಡೇಟು ತಗುಲಿ ಕುಸಿದುಬಿದ್ದಾಗ ಆತನನ್ನು ಬಂಧಿಸಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಯಲ್ಲಿ ಎ.ಎಸ್.ಐ ಅಮೃತ, ಸಿಬ್ಬಂದಿ ಸಿರಾಜ್ ಪಟೇಲ್ ಅವರಿಗೂ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.