ರಾಜ್ಯ ರಾಜಕೀಯದ ಹೊಯ್ದಾಟದಲ್ಲಿ ಮೈತ್ರಿ ಸರಕಾರ ಬಿಜೆಪಿಯ ಹೊಡೆತಕ್ಕೆ ಮೆತ್ತಗಾದಂತಿದ್ದು, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ವಿಧಾನಸಭೆಯಲ್ಲಿ ಇಂದು ಉಂಟಾದ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ ನ 9 ಶಾಸಕರ ಗೈರು ಹಾಜರಿ ಹಿನ್ನೆಲೆಯಲ್ಲಿ ಹಣಕಾಸು ಖಾತೆ ಹೊಂದಿರು ವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ, ಬಜೆಟ್ ಮಂಡಿಸುತ್ತಾರೆಯೇ ಎನ್ನುವ ಕುತೂಹಲ ಉಳಿದುಕೊಂಡಿದೆ. ಬಜೆಟ್ ಮಂಡನೆಗೆ ಭಾರೀ ಉತ್ಸುಕತೆ ತೋರಿದ್ದ ಮುಖ್ಯಮಂತ್ರಿಗೆ ರಾಜಕೀಯ ಬೆಳವಣಿಗೆಗಳು ತಲೆನೋವು ಉಂಟುಮಾಡಿವೆ.
ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ, ಪ್ರತಿಪಕ್ಷ ಬಿಜೆಪಿ ಸದಸ್ಯರು ಎಬ್ಬಿಸಿದ ಗದ್ದಲ ಮತ್ತು ಶಾಸಕರ ಗೈರು ಹಾಜರಿ ಕುಮಾರಸ್ವಾಮಿ ಅವರ ಜಂಘಾಬಲವನ್ನೇ ಕುಗ್ಗಿಸಿದೆ. ಸರ್ಕಾರದಲ್ಲಿನ ಅನಿಶ್ಚಿತತೆ ಮುಂದುವರೆದಿದ್ದು, ಒಂದೆರಡು ದಿನಗಳಲ್ಲಿ ಎದುರಾಗಬಹುದಾದ ರಾಜಕೀಯ ಸವಾಲುಗಳನ್ನು ಎದುರಿಸಿ ಬಜೆಟ್ ಮಂಡಿಸಲಿದ್ದಾರೆಯೇ ಎಂಬುದು ಗೊತ್ತಾಗಬೇಕಿದೆ.