ಕೋವಿಡ್ ನಿಂದ ಮೃತಪಟ್ಟ ರೈತರ ಸಾಲಮನ್ನಾ ಮಾಡುವ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ಚಿಂತನೆ ನಡೆದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೊರೊನಾ ವೈರಸ್ ನಿಂದ ಎಷ್ಟು ಜನ ರೈತರು ಮೃತರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ, ಸಾಲಮನ್ನಾ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಸಹಕಾರ ಇಲಾಖೆಯ ಸಚಿವಾಲಯ ತೆರೆದಿದ್ದು, ಸಚಿವರನ್ನು ನೇಮಕ ಮಾಡಿದೆ. ಇದುವರೆಗೆ ಸಹಕಾರ ಇಲಾಖೆಗೆ ನೆರವು ಸಿಗುತ್ತಿರಲಿಲ್ಲ. ಇದೀಗ ನೆರವು ದೊರೆಯಲಿದ್ದು, ಅದಕ್ಕಾಗಿ ಪ್ರಧಾನಿ ಅವರನ್ನು ಅಭಿನಂದಿಸುವೆ ಎಂದು ಸೋಮಶೇಖರ್ ತಿಳಿಸಿದರು.
ಸದ್ಯದಲ್ಲೆ ಕೇಂದ್ರದಿಂದ 720 ಕೋಟಿ ಬೆಂಬಲ ಬೆಲೆ ಬಿಡುಗಡೆಯಾಗುತ್ತದೆ. ಕೇಂದ್ರದ ಸಹಕಾರ ಇಲಾಖೆಯಿಂದ ರಾಜ್ಯದ ಸಹಕಾರ ಇಲಾಖೆಗೆ ಯಾವುದೇ ತೊಂದರೆ ಆಗಲ್ಲ. ಪಕ್ಷದ ರಾಜಕೀಯ ವಿಚಾರವನ್ನು ವೇದಿಕೆಯಲ್ಲೇ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾತನಾಡಬೇಡಿ ಎಂದು ಪಕ್ಷದ ಆದೇಶವಾಗಿದೆ. ಆದ್ದರಿಂದ ಏನೂ ಪ್ರತಿಕ್ರಿಯೆ ನೀಡಲ್ಲ ಎಂದು ಅವರು ಹೇಳಿದರು.