ಬೆಂಗಳೂರು : ಸಮಾಜದಲ್ಲಿ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ನಿಲುವು. ನಮ್ಮ ಪಕ್ಷಕ್ಕೆ ಸೇರಿದವರು ನಮ್ಮ ಧ್ಯೇಯೋದ್ದೇಶಗಳನ್ನು ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಆ ರೀತಿಯಾಗಿವೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಆಗಮನ ನಮಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಹಾಯವಾಗುತ್ತದೆ. ಏಕೆಂದರೆ ಶೆಟ್ಟರ್ ಒಬ್ಬ ಹಿರಿಯ ರಾಜಕಾರಣಿ ಹಾಗೂ ಬಹಳಷ್ಟು ಅನುಭವವುಳ್ಳವರು. ಅವರು ನಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಅಖಂಡ ಶ್ರೀನಿವಾಸ್ ಮೂರ್ತಿ ಟಿಕೆಟ್ ಮಿಸ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಅಧ್ಯಕ್ಷರು ಫೈನಲ್ ಮಾಡುತ್ತಾರೆ. ಪುಲಕೇಶಿನಗರದ ಬಗ್ಗೆ ಚರ್ಚೆ ಏನಾಗಿದೆ ಎಂದು ಗೊತ್ತಿಲ್ಲ. ರಾಜ್ಯ ಸಮಿತಿಗೆ ನಾವು ಅಖಂಡ ಅವರ ಹೆಸರು ಕಳುಹಿಸಿದ್ದೆವು. ಆದರೆ ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತಾರೆ ಎಂದು ಗೊತ್ತಿಲ್ಲ. ಮಂಗಳವಾರ ಟಿಕೆಟ್ ಫೈನಲ್ ಮಾಡಲಿದೆ ಎಂದು ಹೇಳಿದರು.