ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ ಪ್ರಬಲರಾಗಿದ್ದಾರೆ. ಪರಮೇಶ್ವರಗೆ ತನ್ನದೇ ಆದ ವರ್ಚಸ್ಸಿದೆ. ಸಚಿವರಾಗಿ, ಡಿಸಿಎಂ ಆಗಿ ಕೆಲಸ ಮಾಡಿದವರು. ಅಲ್ಲದೇ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದು, ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳ ಲಿಸ್ಟ್ನಲ್ಲಿದ್ದಾರೆ.
ಕಳೆದ ಎರಡು ವರ್ಷದಿಂದಲೇ ಚುನಾವಣೆ ತಯಾರಿ ಮಾಡಿಕೊಂಡಿರುವ ಜಿ.ಪರಮೇಶ್ವರ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದಿನದಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿರುವುದು ಚುನಾವಣೆಯಲ್ಲಿ ಅವರ ಕೈ ಹಿಡಿಯಬಹುದು.
ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ, ಜಿ.ಪರಮೇಶ್ವರ ಸಮುದಾಯದ ಮತ ಅತಿ ಕಡಿಮೆ ಇದೆ. ಈ ಬಾರಿ ಪರಮೇಶ್ವರರನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಇದು ಪರಮೇಶ್ವರರಿಗೆ ಹೊಡೆತ ಕೊಡುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಹಿಂದೇಟು ಹಾಕಿದ್ದು ಸಹ ಈ ಬಾರಿ ಕೊರಟಗೆರೆ ಕ್ಷೇತ್ರದ ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಪರಮೇಶ್ವರ ವೈಟ್ ಕಾಲರ್ ರಾಜಕಾರಣಿ ಎಂಬ ಹಣೆಪಟ್ಟಿ ಕೂಡ ಹೊತ್ತಿರುವುದು ಪಕ್ಷಕ್ಕೆ ಹಿನ್ನಡೆ ತಂದೊಡ್ಡಬಹುದು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.