ಬೆಂಗಳೂರು: ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಕೇರಳದಲ್ಲಿ ಶತ್ರುಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಅಷ್ಟಕ್ಕೂ ಶತ್ರುಭೈರವಿ ಯಾಗ ಎಂದರೇನು ಇಲ್ಲಿದೆ ಮಾಹಿತಿ.
ಕೇರಳದ ತಂತ್ರಿಗಳನ್ನು ಕರೆಸಿ ಕೇರಳದ ರಾಜರಾಜೇಶ್ವರಿ ದೇವಾಲಯದ ನಿರ್ಜನ ಪ್ರದೇಶದಲ್ಲಿ ಯಾಗ ಮಾಡಿಸಲಾಗುತ್ತಿದೆ ಎಂದು ಡಿಕೆಶಿ ಬಾಂಬ್ ಸಿಡಿಸಿದ್ದಾರೆ. ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂದೂ ಗೊತ್ತು. ಆದರೆ ನಾವು ದೇವರಲ್ಲಿ ನಂಬಿಕೆಯಿರಿಸಿದ್ದೇವೆ. ನಮಗೆ ಏನೂ ಆಗಲ್ಲ ಎಂದಿದ್ದಾರೆ.
ಪುರಾಣಕಾಲದಂದಿಂದಲೂ ಶತ್ರುಭೈರವಿ ಯಾಗಕ್ಕೆ ಅದರದ್ದೇ ಆದ ಪ್ರಾಧಾನ್ಯತೆಯಿದೆ. ಹಿಂದೆ ರಾಜ, ಮಹಾರಾಜರುಗಳು ಶತ್ರುಗಳನ್ನು ಸೋಲಿಸಿ ಸಾರ್ವಭೌಮತ್ವ ಸಾಧಿಸಲು ಭೂಮಂಡಲಾಧೀಶ್ವರರಾಗಲು ಭೈರವಿ ದೇವಿಯ ಆರಾಧನೆ ಮಾಡುತ್ತಿದ್ದರಂತೆ.
ಯಾವುದೇ ಫಲಾಪೇಕ್ಷೆಗಳಿಲ್ಲದ, ತ್ರಿಕರಣ ಶುದ್ಧಿಯುಳ್ಳವರು ಭೈರವಿಯನ್ನು ಸಾತ್ವಿಕ ರೂಪದಲ್ಲಿ ಪೂಜಿಸಿದರೆ ಫಲ ಪಡೆಯುತ್ತಾರೆ ಎಂದು ನಂಬಿಕೆಯಿದೆ. ಆದರೆ ರಾಜಕೀಯ ಮಹತ್ವಾಕಾಂಕ್ಷೆ ಇರುವವರು ಅಘೋರಿ ಪದ್ಧತಿ ಅನುಸರಿಸುತ್ತಾರೆ. ಅದರಂತೆ ಇಲ್ಲಿ ಕುರಿ, ಕೋಣ, ಹಂದಿ, ಕೋಳಿ ಮುಂತಾದ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಅವುಗಳ ಮಾಂಸವನ್ನು ಸಮರ್ಪಣೆ ಮಾಡಲಾಗುತ್ತದೆ.
ಒಂದು ವೇಳೆ ಈ ಕ್ರಮ ಮಾಡುವಾಗ ತಪ್ಪು ನಡೆದಲ್ಲಿ ಮಾಡಿದವರಿಗೂ, ಮಾಡಿಸಿದವರಿಗೂ ತೊಂದರೆ ತಪ್ಪಿದ್ದಲ್ಲ. ವಿಶೇಷವೆಂದರೆ ರಾಜಕಾರಣಿಗಳು ಇಂದಿಗೂ ತಮ್ಮ ಶತ್ರುಗಳನ್ನು ಸೋಲಿಸಿ ಅಧಿಕಾರ ಪಡೆಯಲು ಈ ಯಾಗ ರಹಸ್ಯವಾಗಿ ಮಾಡುತ್ತಾರಂತೆ. ಇದೀಗ ತಮ್ಮ ಮೇಲೆ ಪ್ರಯೋಗಿಸಿರುವುದೂ ಇದೇ ತಂತ್ರ ಎಂದು ಡಿಕೆಶಿ ಆರೋಪಿಸಿದ್ದಾರೆ.