ದಾವಣಗೆರೆ: ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಸಾವಿನ ಪ್ರಕರಣ ಮಾಸುವ ಮುನ್ನವೇ ಗುತ್ತಿಗೆದಾರರೊಬ್ಬರು ನೇಣಿಗೆ ಶರಣಾಗಿರುವುದು ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ತಂದೊಡ್ಡಿದೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೈಗೊಂಡ ಕಾಮಗಾರಿಯ ಬಾಕಿ ಹಣ ಸಕಾಲದಲ್ಲಿ ಬಿಡುಗಡೆ ಮಾಡದೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಪಿಎಸ್ ಗೌಡರ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಈ ಬಗ್ಗೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ವಿಪರ್ಯಾಸವೆಂದರೆ ಈ ಘಟನೆ ಮೇ 26 ರಂದು ನಡೆದಿತ್ತು. ಆದರೆ ಈಗಷ್ಟೇ ಬೆಳಕಿಗೆ ಬರುತ್ತಿದೆ. 2023-24 ನೇ ಸಾಲಿನಲ್ಲಿ ಮಾಡಿದ್ದ ಕೆಲಸಗಳಿಗೆ ಹಣ ಬಿಡುಗಡೆ ಮಾಡದೇ ಕೆಆರ್ ಡಿಎಲ್ ಅಧಿಕಾರಿಗಳು ಸತಾಯಿಸುತ್ತಿದ್ದರು. ಅಧಿಕಾರಿಗಳ ಧೋರಣೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
ಇದರ ಜೊತೆಗೆ ತಮ್ಮ ಸಹೋದರನಿಂದಲೂ ಹಣಕಾಸಿನ ವಂಚನೆಯಾಗಿರುವುದರ ಬಗ್ಗೆ ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಎರಡು ಪ್ರತ್ಯೇಕ ಡೆತ್ ನೋಟ್ ಬರೆಯಲಾಗಿದ್ದು ಸಹೋದರ ಮತ್ತು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತ್ನಿ ವಸಂತ ಕುಮಾರಿ ಪೊಲೀಸರಿಗೆ ದೂರು ನೀಡಿದ್ದಾರೆ.