ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಜಿಲ್ಲಾ ಸಚಿವರಾದ ಜಮೀರ್ ಅಹ್ಮದ್ ಅವರು ಮಾತ್ರ ಅತ್ತ ಕಡೆ ತಲೆ ಹಾಕುತ್ತಿಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದ ಜೆಡಿಎಸ್, ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕೇರಳದಲ್ಲಿ ಪ್ರವಾಸದಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಡವರ ಸಾವಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಇಲ್ಲವಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೂವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಆದರೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹ್ಮದ್ ಜಾಲಿ ಮೂಡ್ನಲ್ಲಿದ್ದಾರೆ.
ಜಿಲ್ಲಾ ಉಸ್ತುವಾರಿ ಹೊಣೆಹೊತ್ತಿರುವ ಜಮೀರ್ ಅವರಿಗೆ, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಲು ಸಮಯ ಇಲ್ಲವಾಗಿದೆ. ಆದರೆ ಕೇರಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರಿಗೆ ಟೈಮ್ ಇದೆ. ಜನರ ಕಷ್ಟ ಆಲಿಸದ ಇಂತಹವರು ಸಚಿವರಾಗಲು ನಾಲಾಯಕ್.