Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿಯ ವಕ್ಫ್ ವಿರುದ್ಧ ಹೋರಾಟದ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ

BJP Waqf protest

Krishnaveni K

ಬೆಂಗಳೂರು , ಶನಿವಾರ, 16 ನವೆಂಬರ್ 2024 (17:15 IST)
ಬೆಂಗಳೂರು: ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇದೇ 21 ಅಥವಾ 22ರಂದು ಜಿಲ್ಲಾಧಿಕಾರಿಗಳ ಕಚೇರಿ (ಡಿ.ಸಿ. ಕಚೇರಿ) ಮುಂದೆ ಹೋರಾಟ ನಡೆಸಲಾಗುವುದು. ಅಲ್ಲದೇ, ಅಹವಾಲು ಸ್ವೀಕಾರ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಣೆಗೆ ಒಳಗಾದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರನ್ನು ಬೆಳಿಗ್ಗೆಯಿಂದ ಸಂಜೆತನಕ ವೇದಿಕೆಗೆ ಬರಮಾಡಿಕೊಂಡು ಅಹವಾಲು ಸ್ವೀಕರಿಸುತ್ತೇವೆ. ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡುತ್ತೇವೆ ಎಂದು ತಿಳಿಸಿದರು.

3 ತಂಡಗಳನ್ನು ರಾಜ್ಯಾಧ್ಯಕ್ಷರು ಈಗಾಗಲೇ ಪ್ರಕಟಿಸಿದ್ದಾರೆ. ವಿಜಯೇಂದ್ರರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಇನ್ನೆರಡು ತಂಡಗಳು ಕಾರ್ಯನಿರ್ವಹಿಸುತ್ತವೆ. ಆ ತಂಡಗಳು ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳ ಪ್ರವಾಸ ಮಾಡಲಿದೆ. ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ನೈಜ ವರದಿಯನ್ನು ತರಲಿದ್ದೇವೆ ಎಂದು ವಿವರಿಸಿದರು.

ಕೇಂದ್ರದ 3 ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿಯವರು ಸೇರಿ ಪ್ರಮುಖ ನಾಯಕರು ಇರುವ ಪ್ರತಿ ತಂಡವು ಕನಿಷ್ಠ 8-10 ಜಿಲ್ಲೆಗಳನ್ನು ಪ್ರವಾಸ ಮಾಡಲಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸದನದಲ್ಲಿ ವಾಸ್ತವಿಕ ಸಮಸ್ಯೆಗಳ ಕಡೆ ಬೆಳಕು ಚೆಲ್ಲುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಡಿಸೆಂಬರ್ ಮೊದಲ ವಾರದಿಂದ ಈ ಪ್ರವಾಸ ಇರುತ್ತದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ..
ಬೆಳಗಾವಿ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಯನ್ನೂ ಆಯೋಜಿಸುತ್ತೇವೆ. 50ರಿಂದ 60 ಸಾವಿರ ಸಾರ್ವಜನಿಕರು, ರೈತರನ್ನು ಸೇರಿಸಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಏರ್ಪಡಿಸುತ್ತೇವೆ. ಪ್ರತಿ ಜಿಲ್ಲೆ, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ವಕ್ಫ್ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ ಎಂದು ಪ್ರೀತಂ ಗೌಡ ಅವರು ವಿವರ ನೀಡಿದರು.
ಹೊಸ ತಕರಾರಿನ, ಸಮಸ್ಯೆಯ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
 
ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಜನರನ್ನು ಮುಟ್ಟಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ 5 ಜನರ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬರು ವಕೀಲರೂ ಇದ್ದಾರೆ ಎಂದು ವಿವರಿಸಿದರು.

ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ ಈ ತಂಡ ರಚಿಸಲಾಗಿದೆ. ‘ನಮ್ಮ ಭೂಮಿ- ನಮ್ಮ ಹಕ್ಕು’ ಶೀರ್ಷಿಕೆಯ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮಠಾಧೀಶರೂ ಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು. ಇದು ಮೊದಲನೇ ಹಂತ ಎಂದರು.
 
ಒಟ್ಟಾಗಿ ಪ್ರವಾಸ ಮಾಡಿ ಸಮಸ್ಯೆಗೆ ತಾರ್ಕಿಕ ಅಂತ್ಯ
ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಹಿರಿಯರು ಮತ್ತು ಶಾಸಕರು. ಅವರು ಬಿಜೆಪಿ ನೈಜ ವರದಿ ತಂಡದಲ್ಲಿ ಪ್ರಮುಖರಿದ್ದಾರೆ. ಅವರನ್ನೂ ಒಳಗೊಂಡಂತೆ ನಾವು ಪ್ರವಾಸ ಮಾಡಲಿದ್ದೇವೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ರೈತರು, ಮಠಮಾನ್ಯಗಳು, ಸಾರ್ವಜನಿಕರಿಗೆ ವಕ್ಫ್‍ನಿಂದ ತೊಂದರೆ ಆಗಬಾರದೆಂಬ ಉದ್ದೇಶ ನಮ್ಮದು. ಎಲ್ಲರೂ ಒಟ್ಟಾಗಿ ಹೋಗಿ ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುತ್ತೇವೆ ಎಂದು ಪ್ರೀತಂ ಗೌಡ ಅವರು ತಿಳಿಸಿದರು.
ಉಪ ಚುನಾವಣೆ ಮತದಾನಕ್ಕೂ ಮುಂಚಿತವಾಗಿ ಪಕ್ಷದ ಆಂತರಿಕ ಸಭೆ ಮಾಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಎಲ್ಲ ಅಭಿಪ್ರಾಯವನ್ನು ಮನ್ನಿಸಿ ದಿನಾಂಕ ನಿರ್ಧರಿಸಿದ್ದೇವೆ. ಚುನಾವಣೆವೇಳೆ ಆ ಕಡೆ ಗಮನ ಕೊಡುವುದು ಸಹಜ. ನಮ್ಮ ಹೋರಾಟ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಹಾಲಿ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು ಹೋರಾಟದಲ್ಲಿ ಇರುತ್ತಾರೆ. ಯಾರನ್ನೂ ಬಿಟ್ಟು ಹೋರಾಟ ಮಾಡುವ ಪ್ರಶ್ನೆಯೇ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷದ ಕಟ್ಟಕಡೆಯ ಕಾರ್ಯಕರ್ತರನ್ನು ಒಳಗೊಂಡ ತಂಡ ಇದಾಗಿರುತ್ತದೆ ಎಂದು ವಿವರಿಸಿದರು.

ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯತ್ನಾಳ್ ಅವರಿಗೆ ವಕ್ಫ್ ಸಂಬಂಧ ರೈತರ ಕಾಳಜಿ ಇರುವುದನ್ನು ನಾವು ನೋಡುತ್ತಿದ್ದೇವೆ. ಆ ಕಾಳಜಿ ಬಿಜೆಪಿಯಲ್ಲೂ ಇರುವುದರಿಂದ ಒಟ್ಟಾಗಿ ಹೋರಾಟ ಮಾಡಲಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಪಕ್ಷವು ಇರುವವರನ್ನು ಕಳಕೊಂಡು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಅಂತೆ ಕಂತೆಗಳಿಗೆ ಉತ್ತರ ಕೊಡಲಾಗದು ಎಂದು ಪ್ರಶ್ನೆಗೆ ಉತ್ತರಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಅಭಿಪ್ರಾಯ ಭೇದಗಳಿದ್ದರೆ ಅದನ್ನು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು. ವೈಯಕ್ತಿಕ ಅನಿಸಿಕೆಗೆ ಬೀಗ ಹಾಕಲಾಗುವುದಿಲ್ಲ. ರಾಜಕಾರಣ ಎಂದ ಮೇಲೆ ಅದೆಲ್ಲ ಸರ್ವೇಸಾಮಾನ್ಯ. ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಲ್ಲೂ ವೈಯಕ್ತಿಕ ಭಿನ್ನಾಭಿಪ್ರಾಯ ಇದೆ. ಆ ಭಿನ್ನಾಭಿಪ್ರಾಯ ಇದ್ದಾಗಲೇ ಪಕ್ಷ ಸರಿದಾರಿಯಲ್ಲಿ ನಡೆಯುತ್ತದೆ. ಈಗಲೂ ಕೂಡ ಸರಿದಾರಿಯಲ್ಲಿ ನಡೆಯಲು ಅವರನ್ನೂ ಕೂಡ ಸೇರಿಸಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
 
3 ಉಪ ಚುನಾವಣೆಯಲ್ಲಿ ಎನ್‍ಡಿಎ ಕೂಟ ಗೆಲ್ಲಲಿದೆ..
3 ಉಪ ಚುನಾವಣೆಯಲ್ಲಿ ಎನ್‍ಡಿಎ ಕೂಟ ಗೆಲ್ಲುವುದು ಖಚಿತ. ಪಕ್ಷದ ತೀರ್ಮಾನದಂತೆ ನಾನು ಸಂಡೂರಿನಲ್ಲಿ 12-14 ದಿನ ವಾಸ್ತವ್ಯವಿದ್ದು ಕೆಲಸ ಮಾಡಿದ್ದೇನೆ. ಒಬ್ಬೊಬ್ಬ ಪ್ರಧಾನ ಕಾರ್ಯದರ್ಶಿ ಒಂದೊಂದು ಕಡೆ ಕೆಲಸ ಮಾಡಲು ತೀರ್ಮಾನ ಆಗಿತ್ತು. ನಿಖಿಲ್ ಕುಮಾರಸ್ವಾಮಿ ಅವರು ಕನಿಷ್ಠ 25 ಸಾವಿರದಿಂದ 30 ಸಾವಿರ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಪ್ರೀತಂ ಗೌಡ ಅವರು ಉತ್ತರ ಕೊಟ್ಟರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕೊಠಡಿಗೆ ಹೊಸ ರೂಪ: ಸಮಾಜವಾದಿ ಮುಖವಾಡದ ಮಜಾವಾದಿ ಸಿದ್ದರಾಮಯ್ಯ