ಧಾರವಾಡ : ಸಂಜೆಯಾದರೆ ಯುವತಿಯರು ಹೊರಗಡೆ ಹೋಗಲು ಭಯಪಡುವಂಥ ವಾತಾವರಣ ಹಲವಾರು ಕಡೆಗಳಲ್ಲಿ ಇದೆ.
ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಂತೂ ಸಮಸ್ಯೆ ಹೇಳತೀರದ್ದು.
ಮನೆಯಿಂದ ಹೊರಗೆ ಹೋಗಿರುವ ಹುಡುಗಿಯರು, ಯುವತಿಯರು ಸುರಕ್ಷಿತವಾಗಿ ಮರಳಿ ಮನೆಗೆ ಬರುತ್ತಾರೆ ಅನ್ನುವ ಹಾಗಿಲ್ಲ. ಇಂಥ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿಗೆ ರಾಜ್ಯ ಸರಕಾರ ನಿರ್ಧಾರ ಮಾಡಿದೆ.
ಈ ಸೆಲ್ಫ್ ಡಿಫೆನ್ಸ್ ತರಬೇತಿ ರಾಜ್ಯದ ಬಿಸಿಎಂ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗಾಗಿ ಆರಂಭಿಸಲಾಗಿದೆ. ಈ ಬಗ್ಗೆ ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ ಮಾಹಿತಿಯನ್ನು ನೀಡಿದ್ದಾರೆ.
ಮಹಿಳೆಯರಿಗೆ ಸ್ವಯಂ ರಕ್ಷಣೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಂತೂ ಇದು ಅತಿ ಅವಶ್ಯಕವೆನಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇಂಥದ್ದೊಂದು ತರಬೇತಿಯನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ವಿ. ರಶ್ಮಿ ಮಹೇಶ ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.