ಬೆಂಗಳೂರು: ಧರ್ಮಸ್ಥಳಕ್ಕೆ ವಿರುದ್ಧದ ಪಿತೂರಿಯಲ್ಲಿ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ ಸೆಂಥಿಲ್ ಅವರ ಪಾತ್ರವಿದ್ದು ಎಂದು ಆರೋಪಿಸಿದ್ದ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಇದೀಗ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಸದ ಶಶಿಕಾಂತ ಸೆಂಥಿಲ್ ಬೆಂಗಳೂರಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಸಂಬಂಧ, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಬೆಳಿಗ್ಗೆ ಖುದ್ದು ಹಾಜರಾಗಿದ್ದರು.
ದೂರನ್ನು ನೀಡಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ನನ್ನ ಹೆಸರನ್ನು ಪ್ರತಿನಿತ್ಯವೂ ಎಳೆದುತರಲಾಗುತ್ತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ನಾನು ಬಲಪಂಥೀಯ ಚಟುವಟಿಕೆಗಳ ಬಗ್ಗೆ ಹೊಂದಿರುವ ನಿಲುವಿನಿಂದಾಗಿಯೇ ಕೆಲವರು ಇಂತಹ ಗುಲ್ಲೆಬ್ಬಿಸುತ್ತಿದ್ದಾರೆ. ಕರ್ನಾಟಕದ ಜನತೆಗೆ ಟೋಪಿ ಹಾಕುತ್ತಿದ್ದಾರೆ. ಜನಾರ್ದನ ರೆಡ್ಡಿ ಗಣಿ ಲೂಟಿ ಹೊಡೆದ ವ್ಯಕ್ತಿ. ಆತ ನ್ಯಾಯಮೂರ್ತಿಗಳನ್ನೇ ಬಿಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದರು.